ADVERTISEMENT

ಜೆ.ಪಿ‌.ನಗರದ ವರುಣ್ ಕೊಲೆ ಪ್ರಕರಣ: ಆರೋಪಿ ವಿರುದ್ಧದ ವಿಚಾರಣೆ ರದ್ದು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:15 IST
Last Updated 3 ಮಾರ್ಚ್ 2026, 16:15 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಒಟ್ಟು 13 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ತೀರ್ಪು ಆಧರಿಸಿ ಪ್ರಕರಣದ 14ನೇ ಆರೋಪಿ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ವಿಚಾರಣೆಯ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಡಿ.ಪ್ರವೀಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದ ಇತರ ಎಲ್ಲಾ 13 ಆರೋಪಿಗಳು ಈಗಾಗಲೇ ಖುಲಾಸೆಯಾಗಿದ್ಧಾರೆ. ಆರೋಪಿಗಳ ವಿರುದ್ಧದ ಅಪರಾಧಗಳನ್ನು ದೃಢಪಡಿಸುವಲ್ಲಿ ತನಿಖಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ಧಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಷನ್ಸ್‌ ನ್ಯಾಯಾಲಯ ಪ್ರವೀಣ್‌ ವಿರುದ್ಧದ ವಿಚಾರಣೆ ಮುಂದುವರಿಸಿದರೂ ಖುಲಾಸೆಯಾಗಬಹುದು. ಹಾಗಾಗಿ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸುವ ದೃಷ್ಟಿಯಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವುದು ಸೂಕ್ತ’ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ADVERTISEMENT

ಪ್ರಕರಣ: ಜೆ.ಪಿ‌.ನಗರದ ವರುಣ್ (24) ಎಂಬ ತರುಣನನ್ನು‌ 2019ರ ಆಗಸ್ಟ್ 25ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಜೆ.ಪಿ.ನಗರ ಠಾಣೆಯ ಪೊಲೀಸರು‌ ಅರ್ಜಿದಾರ ಪ್ರವೀಣ್ ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ, ಕೊಲೆ, ಅಕ್ರಮ ಕೂಟ ಮತ್ತು ಅಪರಾಧಿಕ ಒಳಸಂಚು ಆರೋಪ ಹೊತ್ತಿದ್ದ ಪ್ರಕರಣದಲ್ಲಿನ 13 ಆರೋಪಿಗಳನ್ನು ಖುಲಾಸೆಗೊಳಿಸಿ 2025ರ ಆಗಸ್ಟ್ 30ರಂದು ಆದೇಶಿಸಿತ್ತು. ‘ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದಾನೆ’ ಎಂಬ ಕಾರಣಕ್ಕಾಗಿ ಪ್ರಕರಣದ 14ನೇ ಆರೋಪಿ ಪ್ರವೀಣ್‌ ವಿರುದ್ಧ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿತ್ತು.

‘ಗಾಯಾಳು ರಕ್ಷಣೆಗೆ ಆದ್ಯತೆ–ದೂರಿಗಲ್ಲ'

‘ಅಪರಾಧ ಘಟಿಸಿದಾಗ ಸಂತ್ರಸ್ತರ ಕುಟುಂಬವು ಗಾಯಾಳು ಬಗ್ಗೆ ಕಾಳಜಿ ತೋರುತ್ತದೆಯೇ ಹೊರತು ಪೊಲೀಸರಿಗೆ ದೂರು ನೀಡುವ ಬಗ್ಗೆ ಅಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ. ದಾವಣಗೆರೆ ಜಿಲ್ಲಾ ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೊನ್ನಾಳಿ ತಾಲ್ಲೂಕು ನ್ಯಾಮತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಟಿ.ಗೋಪಗೊಂಡನ ಹಳ್ಳಿ ಮಂಜಪ್ಪ (55) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.  ‘ಕೊಲೆ ಪ್ರಕರಣದಲ್ಲಿ ದೂರುದಾರರು ದೂರು ದಾಖಲಿಸುವಲ್ಲಿ ವಿಳಂಬ ಮಾಡಿದ್ದರೆ ಅದು ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ ‘ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಗೊಳಿಸಲು ನಮಗೆ ಯಾವುದೇ ಆಧಾರಗಳು ಕಂಡುಬರುವುದಿಲ್ಲ’ ಎಂದು ಹೇಳಿದೆ. ಪ್ರಕರಣವೇನು: ‘ಶಿವಕುಮಾರ್‌ ಮಂಜಪ್ಪನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಶಿವಕುಮಾರ್‌ ಆಗ್ಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದ ಕಾರಣಕ್ಕೆ ಮಾವ-ಅಳಿಯನ ಜತೆ ಗಲಾಟೆ ನಡೆಯುತ್ತಿತ್ತು. ಇಂತಹುದೇ ಒಂದು ಸನ್ನಿವೇಶದಲ್ಲಿ ಶಿವಕುಮಾರ್ 2017ರ ಅಕ್ಟೋಬರ್ 6ರಂದು ಟಿ.ಗೋಪಗೊಂಡನ ಹಳ್ಳಿಯ ಮನೆಯಲ್ಲಿ ಮಲಗಿದ್ದಾಗ ಮಂಜಪ್ಪ ಶಿವಕುಮಾರ್‌ಗೆ ಮರದ ದಿಮ್ಮಿ ತೆಗೆದುಕೊಂಡು ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದ. ಪರಿಣಾಮ ಕೆಲ ದಿನಗಳ ಬಳಿಕ ಶಿವಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. ಮಂಜಪ್ಪನ ವಿರುದ್ಧ ಮಗಳು ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಭಾರತೀಯ ದಂಡ ಸಂಹಿತೆ–1860ರ ಕಲಂ 302ರ ಪ್ರಕಾರ ಮಂಜಪ್ಪ ಅಪರಾಧಿ ಎಂದು ಸಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.