ADVERTISEMENT

ಜಿಂದಾಲ್‌ಗೆ 3,667 ಎಕರೆ: ಆಕ್ಷೇಪದ ಮಧ್ಯೆಯೂ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 20:00 IST
Last Updated 27 ಮೇ 2019, 20:00 IST
   

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿಯನ್ನು ಜೆ.ಎಸ್‌.ಡಬ್ಲ್ಯೂಸ್ಟೀಲ್‌ ಲಿಮಿಟೆಟ್‌ (ಜಿಂದಾಲ್‌) ಕಂಪನಿಗೆ ಶುದ್ಧ ಕ್ರಯ ಪತ್ರ (ಸೇಲ್ ಡೀಡ್‌) ಮಾಡಿಕೊಡುವ ಪ್ರಸ್ತಾವಕ್ಕೆ ಕೆಲವು ಸಚಿವರ ಆಕ್ಷೇಪದ ಮಧ್ಯೆಯೂ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದೆ.

ಬಳ್ಳಾರಿ ತಾಲ್ಲೂಕಿನ ತೋರಣಗಲ್, ಕರೇಗುಪ್ಪ ಗ್ರಾಮಗಳಲ್ಲಿ 2000.58 ಎಕರೆ ಭೂಮಿಯನ್ನು ಎಕರೆಗೆ ₹ 1.22 ಲಕ್ಷದಂತೆ ಮತ್ತು ಸಂಡೂರು ತಾಲ್ಲೂಕಿನ ಮುಸಿನಾಯಕನಹಳ್ಳಿ, ಎರಬನಹಳ್ಳಿ ಗ್ರಾಮಗಳಲ್ಲಿ 1,666.73 ಎಕರೆ ಭೂಮಿಯನ್ನು ಎಕರೆಗೆ ₹ 1.50 ಲಕ್ಷದಂತೆ ಕಂಪನಿಗೆ ಮಾರಾಟ ಮಾಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.

ಸಂಪುಟ ಸಭೆಯಲ್ಲಿ ಈ ವಿಷಯ ಸುಮಾರು ಒಂದು ಗಂಟೆ ಚರ್ಚೆಯಾಗಿದೆ. ಈ ಪ್ರಸ್ತಾವವನ್ನು ಸದ್ಯ ಮುಂದೂಡಿ, ಇನ್ನಷ್ಟು ಮಾಹಿತಿ ಪಡೆದು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸುವ ಬಗ್ಗೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದದ್ದಾರೆ. ಆದರೆ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಪಟ್ಟು ಹಿಡಿದ ಪರಿಣಾಮ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಚ್‌.ಕೆ.ಪಾಟೀಲ ವಿರೋಧ: ರಾಜ್ಯ ಸರ್ಕಾರದ ಈ ನಿಲುವಿಗೆ ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ.ಪಾಟೀಲ ತೀವ್ರ ವಿರೋಧ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಸಂಸ್ಥೆಗೆ ಜಿಂದಾಲ್ ಸಂಸ್ಥೆ 1200 ಕೋಟಿಗೂ ಹೆಚ್ಚು ಬಾಕಿ ಪಾವತಿಸಬೇಕಿದೆ. ಆ ಮೊತ್ತ ವಸೂಲಿಗೆ ಕ್ರಮ ತೆಗೆದುಕೊಳ್ಳುವ ಬದಲು ಇಂಥದ್ದೊಂದು ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ಸರಿಯಲ್ಲ’ ಎಂದೂ ಅವರು ವಾದಿಸಿದ್ದಾರೆ.

‘2013ರಿಂದ 2018ರ ಅವಧಿಯಲ್ಲಿ ಉಕ್ಕು ಹಾಗೂ ಗಣಿಗಾರಿಕೆಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ಬೊಕ್ಕಸಕ್ಕೆ ಆಗಿರುವ ನಷ್ಟದ ಬಗ್ಗೆ ತನಿಖೆ ನಡೆಸುವುದು; ಲೋಕಾಯುಕ್ತ ವರದಿಯ ಮೇಲೆ ಕೈಗೊಳ್ಳಲಾದ ಕ್ರಮಗಳ ಮೇಲ್ವಿಚಾರಣೆ ನಡೆಸಲು ನನ್ನ ನೇತೃತ್ವದಲ್ಲಿಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಮಿತಿಯು ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ಆದರೆ ಕ್ರಮ ಕೈಗೊಳ್ಳುವ ಬದಲು ಭೂಮಿ ನೀಡುತ್ತಿರುವುದು ಸರಿಯಲ್ಲ’ ಎಂದು ಮನವಿ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.

ಮೋಡ ಬಿತ್ತನೆ: ಮೋಡ ಬಿತ್ತನೆಗೆ ಸಿದ್ಧತೆಗಳು ಆರಂಭವಾಗಿದ್ದು, ಈ ವರ್ಷ ಹಾಗೂ ಮುಂದಿನ ಸಾಲಿಗೆ ₹91 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೇಂದ್ರ ಸರ್ಕಾರದಿಂದ ಕೆಲವು ಅನುಮತಿ ಸಿಕ್ಕ ನಂತರ ಪ್ರಕ್ರಿಯೆ ಆರಂಭಿಸಲಾಗುತ್ತದೆ. 40ರಿಂದ 45 ದಿನಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಭಾಗದಲ್ಲಿಮೋಡ ಬಿತ್ತನೆ ನಡೆಯಲಿದೆಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.