ADVERTISEMENT

ಮಿಂಟೋ ವೈದ್ಯರ ಮೇಲೆ ಹಲ್ಲೆ ಪ್ರಕರಣ: ನಾಳೆ ರಾಜ್ಯದಾದ್ಯಂತ ಒಪಿಡಿ ಬಂದ್

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕ್ಷಮೆಯಾಚಿಸಲು ವೈದ್ಯರ ಪಟ್ಟು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:16 IST
Last Updated 7 ನವೆಂಬರ್ 2019, 10:16 IST
   

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರ (ನ.8) ರಾಜ್ಯದಾದ್ಯಂತ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್‌ ಮಾಡಿ ಪ್ರತಿಭಟಿಸಲು ವೈದ್ಯರು ನಿರ್ಧರಿಸಿದ್ದಾರೆ.

‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನವಾದ ಗುರುವಾರವೂ ಮುಂದುವರೆಯಿತು. ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿ ಬರುವ ಆಸ್ಪತ್ರೆಗಳ ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಯಿತು.

ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) , ಫನಾ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆ ಬೆಂಬಲ ಸೂಚಿಸಿವೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆವರೆಗೂ ಒಪಿಡಿ ಬಂದ್ ಮಾಡಲು ಐಎಂಎ ಕರೆ ನೀಡಿದೆ. ತುರ್ತು ಸೇವೆಗಳು ಮಾತ್ರ ದೊರೆಯಲಿವೆ.

ADVERTISEMENT

ಐಎಂಎ ರಾಜ್ಯ ಶಾಖೆ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ್, ‘ಈವರೆಗೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಒಪಿಡಿ ಬಂದ್ಗೆ ಕರೆ ನೀಡಲಾಗಿದೆ. ತುರ್ತು ಸೇವೆಗಳು ಲಭ್ಯ ಇರಲಿವೆ ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.