ADVERTISEMENT

ಪಾಠವಷ್ಟೇ ಮಾಡಿ, ಸಂಶೋಧನೆ ಬೇಡ!

ಕಾಲೇಜು ಶಿಕ್ಷಣ: ಆಯುಕ್ತರ ಕಾರ್ಯಭಾರ ಸುತ್ತೋಲೆಗೆ ಅಧ್ಯಾಪಕರ ಅಚ್ಚರಿ

ಎಂ.ಜಿ.ಬಾಲಕೃಷ್ಣ
Published 17 ಡಿಸೆಂಬರ್ 2019, 2:04 IST
Last Updated 17 ಡಿಸೆಂಬರ್ 2019, 2:04 IST
ಕಾಲೇಜು ಶಿಕ್ಷಣ ಇಲಾಖೆ
ಕಾಲೇಜು ಶಿಕ್ಷಣ ಇಲಾಖೆ   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನಶೈಕ್ಷಣಿಕ, ಸಹ-ಶೈಕ್ಷಣಿಕ ಮತ್ತು ಶಿಕ್ಷಣೇತರಚಟುವಟಿಕೆಗಳನ್ನು‌ ಸ್ಪಷ್ಟವಾಗಿ ವಿಂಗಡಿಸಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮಾವಳಿ ರೂಪಿಸಿದ್ದರೂ, ಅದಕ್ಕೆ ವ್ಯತಿರಿಕ್ತವಾದ ಸುತ್ತೋಲೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ್ದಾರೆ ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.

‘ಇನ್ನು ಮುಂದೆ ಆಡಳಿತ ವಿಷಯದಲ್ಲಿ ಕಡ್ಡಾಯವಾಗಿ ಪ್ರಾಂಶುಪಾಲರಿಗೆ ನೆರವಾಗಬೇಕು, ತಪ್ಪಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಇದೇ 12ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಯುಜಿಸಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆದೇಶಗಳ ಪ್ರಕಾರ ಪದವಿ ಕಾಲೇಜುಗಳಲ್ಲಿನ ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ವಾರಕ್ಕೆ 40 ಗಂಟೆಗಳ ಅವಧಿಯ ಪಠ್ಯ, ಸಹ- ಪಠ್ಯ, ಪಠ್ಯೇತರ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾರ್ಯಭಾರ ನಿಭಾಯಿಸಬೇಕು. ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಧ್ಯಾಪಕರಿಗೆ ನೇರ ತರಗತಿ ಶಿಕ್ಷಣ ಕಾರ್ಯಭಾರದಲ್ಲಿ 2 ಗಂಟೆಗಳ ವಿನಾಯತಿ ನೀಡಬೇಕು ಎಂಬ ನಿಯಮವಿದೆ.

ADVERTISEMENT

ತರಗತಿ ಬೋಧನೆ, ಕಲಿಕೆ ಮತ್ತು ಮೌಲೀಕರಣ ಸಂಬಂಧಿತ ಚಟುವಟಿಕೆಗಳು (ಕೆಟಗರಿ-1), ಸಹ-ಪಠ್ಯ, ವಿಸ್ತರಣಾ-ಚಟುವಟಿಕೆಗಳು ಮತ್ತು ವೃತ್ತಿ-ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳು (ಕೆಟಗರಿ-2) ಹಾಗೂ ಸಂಶೋಧನೆ ಮತ್ತು ಶೈಕ್ಷಣಿಕ ಕೊಡುಗೆಗಳು (ಕೆಟಗರಿ-3) ಎಂದು ಯುಜಿಸಿ ವಿಂಗಡಿಸಿದೆ. ಆದರೆ ಇಲಾಖೆಯು ಇದೀಗ ಗೊತ್ತುಪಡಿಸಿರುವ ಕಾರ್ಯಭಾರವು ಕೆಟಗರಿ-1ಕ್ಕೆ ಮಾತ್ರ ಸೀಮಿತವಾಗಿದೆ.

ಅಧ್ಯಾಪಕರ ಪದೋನ್ನತಿಗಾಗಿ ಅವಶ್ಯವಾಗಿ ನಿರ್ವಹಿಸಲೇಬೇಕಾಗಿರುವ ಕೆಟಗರಿ-2 ಮತ್ತು
ಕೆಟಗರಿ-3ಕ್ಕೆಸಂಬಂಧಿಸಿದ ಇತರ ಚಟುವಟಿಕೆಗಳನ್ನು ನಿರ್ವಹಿಸಲು ಇದೀಗ ಅವಕಾಶ ಇಲ್ಲ ಎಂದು ಹಲವು ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಆಯುಕ್ತ ಪಿ.ಅನಿರುದ್ಧ್‌ ಶ್ರವಣ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ನೂತನ ಸುತ್ತೋಲೆ ಖಂಡನೀಯ. ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸಂಖ್ಯೆ ಕಡಿಮೆಗೊಳಿಸುವ ಹುನ್ನಾರ ಇದರ ಹಿಂದೆ ಇದ್ದಂತಿದೆ ಎಂದುಸರ್ಕಾರಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ- ಡಾ.ಟಿ.ಎಂ.ಮಂಜುನಾಥ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.