ADVERTISEMENT

ನರೇಗಾ ಕೂಲಿ: 150 ದಿನಕ್ಕೆ ಏರಿಕೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 15:10 IST
Last Updated 11 ಡಿಸೆಂಬರ್ 2020, 15:10 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ   

ಚಿತ್ರದುರ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನವನ್ನು 100ರಿಂದ 150 ದಿನಗಳಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರೇಗಾ ಯೋಜನೆಯಡಿ ವ್ಯಕ್ತಿಯೊಬ್ಬರು ಗರಿಷ್ಠ 100 ದಿನ ಕೂಲಿ ಪಡೆಯಲು ಅವಕಾಶವಿತ್ತು. ಲಾಕ್‌ಡೌನ್‌ ಬಳಿಕ ಊರಿಗೆ ಮರಳಿದ ಕಾರ್ಮಿಕರು ಗರಿಷ್ಠ ಕೂಲಿ ಪಡೆದಿದ್ದರು. ಹೀಗಾಗಿ, ಕೂಲಿ ದಿನಗಳನ್ನು 150 ದಿನಕ್ಕೆ ಏರಿಕೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ಈಗಾಗಲೇ 100 ದಿನ ಪೂರೈಸಿದವರೆಗೆ ಹೆಚ್ಚುವರಿಯಾಗಿ ಇನ್ನೂ 50 ದಿನ ಕೆಲಸ ಮಾಡಲು ಅವಕಾಶವಿದೆ. ಇದರಿಂದ ರಾಜ್ಯಕ್ಕೆ ₹ 800 ಕೋಟಿ ಹೆಚ್ಚುವರಿ ಅನುದಾನ ಲಭ್ಯವಾಗಿದೆ. ಪರಿಷ್ಕೃತ ಆದೇಶ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಉಳಿದ ರಾಜ್ಯದ ಕೂಲಿ ದಿನಗಳ ಏರಿಕೆ ಬಗ್ಗೆ ಮಾಹಿತಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ತಾಯಿ ಕರೆದೊಯ್ಯಲು ಬಿಡುವಿರಾ?

‘ನಿಮ್ಮ ತಾಯಿಗೆ ವಯಸ್ಸು ಆಗಿದೆ. ಅವರನ್ನು ಕರೆದೊಯ್ದು ಬೇರೆಡೆ ಬಿಡಲು ನೀವು ಒಪ್ಪುವಿರಾ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಈಶ್ವರಪ್ಪ ಪ್ರಶ್ನಿಸಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ತಾಯಿ ಸ್ಥಾನವಿದೆ. ಮುದಿಯಾದ ಹಸುಗಳನ್ನು ಬಿಜೆಪಿ ಕಾರ್ಯಾಲಯಕ್ಕೆ ಬಿಡಬಹುದೇ ಎಂದು ಸಿದ್ದರಾಮಯ್ಯ ಕೇಳಿರುವುದು ಉಡಾಫೆಯಾಗಿದೆ. ಅವರ ತಾಯಿ ನನಗೂ ತಾಯಿ ಸಮಾನರು. ವಯಸ್ಸು ಆಗಿದೆ ಎಂಬ ಕಾರಣಕ್ಕೆ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಲು ಸಾಧ್ಯವಿಲ್ಲವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.