ADVERTISEMENT

ಶೋಷಿತರ ಧ್ವನಿಯಾಗಿದ್ದ ನಾಯಕ ಎ.ಕೆ.ಸುಬ್ಬಯ್ಯ

ಅದಿತ್ಯ ಕೆ.ಎ.
Published 27 ಆಗಸ್ಟ್ 2019, 20:35 IST
Last Updated 27 ಆಗಸ್ಟ್ 2019, 20:35 IST
ಎ.ಕೆ.ಸುಬ್ಬಯ್ಯ (ಪ್ರಜಾವಾಣಿ ಚಿತ್ರ: ಪಿ.ಎಸ್.ಕೃಷ್ಣಕುಮಾರ್)
ಎ.ಕೆ.ಸುಬ್ಬಯ್ಯ (ಪ್ರಜಾವಾಣಿ ಚಿತ್ರ: ಪಿ.ಎಸ್.ಕೃಷ್ಣಕುಮಾರ್)   

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಹಿರಿಯ ರಾಜಕಾರಣಿ, ಹೋರಾಟಗಾರ, ವಕೀಲಎ.ಕೆ.ಸುಬ್ಬಯ್ಯ (85) ಮಂಗಳವಾರ ಮಧ್ಯಾಹ್ನ ನಗರದಲ್ಲಿ ನಿಧನರಾದರು.

ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2017ರ ಜನವರಿಯಿಂದ ಡಯಾಲಿಸಿಸ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಪುತ್ರ ಸಹಾಯಕ ಅಡ್ವೊಕೇಟ್‌ ಜನರಲ್‌ ಎ.ಎಸ್‌. ಪೊನ್ನಣ್ಣ, ಐವರು ಪುತ್ರರು ಇದ್ದಾರೆ.

ಶೋಷಿತರ ಧ್ವನಿ, ಪ್ರಖರ ವಿಚಾರವಾದಿ, ಕಾನೂನು ತಜ್ಞ

ಮಡಿಕೇರಿ: ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ.ಸುಬ್ಬಯ್ಯ)... ಅವರೊಬ್ಬರು ಕೇವಲ ರಾಜಕಾರಣಿ ಆಗಿರಲಿಲ್ಲ. ಧ್ವನಿಯಿಲ್ಲದವರ ಪಾಲಿಗೆ ಹೋರಾಟದ ಮೂಲಕ ‘ಬೆಳಕು’ ಕಲ್ಪಿಸಿದ ನಾಯಕ. ಪ್ರಖರ ವಿಚಾರವಾದಿ, ಕಾನೂನು ತಜ್ಞ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶಾಶ್ವತ ವಿರೋಧ ಪಕ್ಷದ ನಾಯಕರಂತೆ ಚಾಟಿ ಬೀಸುತ್ತಿದ್ದ ಹೋರಾಟಗಾರ.

ಬದುಕಿನ ಹಾದಿ:ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಕೋಣಗೇರಿ ಅಜ್ಜಿಕುಟೀರ ಕಾರ್ಯಪ್ಪ ಹಾಗೂ ಚಿನ್ನಮ್ಮ ದಂಪತಿ ಏಕೈಕ ಪುತ್ರ ಎ.ಕೆ.ಸುಬ್ಬಯ್ಯ. 1934ರ ಆಗಸ್ಟ್‌ 9ರಂದು ಜನಿಸಿದರು. ಚಿಕ್ಕಂದಿನಿಂದಲೇ ಶೋಷಣೆಯ ವಿರುದ್ಧ ಧ್ವನಿಯೆತ್ತಲು ಆರಂಭಿಸಿದರು. ಕೊನೆಯ ತನಕವೂ ಹೋರಾಟಕ್ಕೆ ವಿರಾಮ ಹಾಕಲಿಲ್ಲ.

ಸುಬ್ಬಯ್ಯ ಚಿಕ್ಕವರಿದ್ದಾಗಲೇ ಅವರ ತಂದೆ ತೀರಿಕೊಂಡಿದ್ದರಿಂದ ಸೋದರ ಮಾವನ ಮನೆಯಲ್ಲಿ ಬೆಳೆದರು. ಹರಿಹರ ಸಮೀಪದ ಶಾಲೆಯಲ್ಲಿ ಸುಬ್ಬಯ್ಯ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಸಹಪಾಠಿಗಳು ಗೇಲಿ ಮಾಡುತ್ತಿದ್ದರು. ಆಗ ಹೋರಾಟದ ಕಿಚ್ಚು ಬೆಳೆಯಿತು. ಶ್ರೀಮಂಗಲ ಕಂದಾಯ ಕಚೇರಿಯಲ್ಲಿ ರೈತರಿಗೆ ಕಿರುಕುಳು ನೀಡುತ್ತಿದ್ದ ಮಾಹಿತಿ ಸುಬ್ಬಯ್ಯ ಕಿವಿಗೆ ಬಿದ್ದಿತ್ತು. ವಿದ್ಯಾರ್ಥಿ ದಿನದಲ್ಲಿ ಪಾರುಪತ್ಯೆಗಾರರನ್ನು ಪ್ರಶ್ನಿಸಿದ್ದರ ಪರಿಣಾಮ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು.

ಸೋಮವಾರಪೇಟೆ ತಾಲ್ಲೂಕಿನ ಗೆಜ್ಜೆಹನಗೋಡಿನ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ನಂತರ, ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಮಡಿಕೇರಿಯಲ್ಲಿ ಬಿಎಸ್‌ಸಿ ಪದವಿಗೆ ಕಾಲೇಜು ಸೇರಿದರು. ಆಗ ಬಿಎ ವ್ಯಾಸಂಗ ಮಾಡುತ್ತಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ವಿರುದ್ಧ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಸುಬ್ಬಯ್ಯ ಸೋಲು ಕಂಡಿದ್ದರು.

ನಂತರ, ಕಾನೂನು ‍ಪದವಿಗೆ ಮೈಸೂರಿನತ್ತ ಹೊರಟರು. 1963ರಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪದೆದು ವಿರಾಜಪೇಟೆಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ಆಗ ರಾಜಕೀಯದತ್ತಲೂ ಆಸಕ್ತಿ ಬೆಳೆಯಿತು. 1959ರಲ್ಲಿ ನಡೆದ ಚುನಾವಣೆಯಲ್ಲಿ ‘ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ’ ಅಭ್ಯರ್ಥಿ ಪರ ವಿರಾಜಪೇಟೆಯಲ್ಲಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ 1966ರಲ್ಲಿ ಜನಸಂಘದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು ಸುಬ್ಬಯ್ಯ.

ಹೋರಾಟವೇ ಉಸಿರು:ಸುಬ್ಬಯ್ಯ ಹೋರಾಟಗಾರ, ಚಳವಳಿಗಾರ, ನಿಷ್ಠುರವಾದಿ. ಶೋಷಿತರಿಗೆ ಸೌಲಭ್ಯಗಳು ಸಿಗದಿದ್ದರೆ ರಾಜಿಯಿಲ್ಲದೆ ಹೋರಾಡುತ್ತಿದ್ದರು. ನ್ಯಾಯ ಸಿಗುವ ತನಕವೂ ಬಿಡುತ್ತಿರಲಿಲ್ಲ. ನೊಂದವರಿಗೆ ನ್ಯಾಯಾಲಯದಲ್ಲೂ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

ಅದೇ ಕಾರಣಕ್ಕೆ ಹೋರಾಟಗಳಲ್ಲಿ ಸಾಧಿಸಿದ್ದಕ್ಕಿಂತಲೂ ವಕೀಲರಾಗಿ ವಕಾಲತ್ತು ವಹಿಸಿ ಜನರಿಗೆ ನ್ಯಾಯ ಒದಗಿಸಿದ್ದೇ ಒಮ್ಮೊಮ್ಮೆ ಹೆಚ್ಚು ಸಂತೋಷ ನೀಡುತ್ತದೆ ಎಂದು ಸುಬ್ಬಯ್ಯ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದರು.

‘ಅವರಿಗೆ ವಕೀಲ ವೃತ್ತಿಯೆಂದರೆ ಬಲು ಪ್ರೀತಿ. ಆದರೆ, ಪರಿಸ್ಥಿತಿ ರಾಜಕೀಯ ಕ್ಷೇತ್ರಕ್ಕೂ ಎಳೆದೊಯ್ಯುವಂತೆ ಮಾಡಿತ್ತು. ಅದರಲ್ಲೂ ಯಶಸ್ವಿಯಾಗಿದ್ದರು. ಕೊನೆಯಲ್ಲಿ ರಾಜಕಾರಣ ಕ್ಷೇತ್ರವು ಅವರ ಕಾಲೆಳೆಯಿತು ಎಂದು ಸ್ನೇಹಿತರು ಹೇಳುತ್ತಾರೆ.

ಬಿಜೆಪಿಯಿಂದ ಉಚ್ಚಾಟನೆ:ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ಸುಬ್ಬಯ್ಯ ಅವರ ಒಡನಾಟ ಹೆಚ್ಚಿತ್ತು. ವಾಜಪೇಯಿ ರಾಜ್ಯಕ್ಕೆ ಬಂದಾಗ ಸುಬ್ಬಯ್ಯ ಅವರು ಜೊತೆಗಿರುತ್ತಿದ್ದರು. ವಿರಾಜಪೇಟೆ ನಿವಾಸಕ್ಕೂ ವಾಜಪೇಯಿ ಭೇಟಿ ನೀಡಿದ್ದರು. ಜನಸಂಘದ ಮೂಲಕ ಬೆಳೆದು ಬಂದು ನಂತರ ಭಾರತೀಯ ಜನತಾ ಪಕ್ಷಕ್ಕೆ ಇಡೀ ರಾಜ್ಯದಲ್ಲಿ ಬುನಾದಿ ಕಲ್ಪಿಸುವಲ್ಲಿ ಸುಬ್ಬಯ್ಯ ಪಾತ್ರ ಮಹತ್ವದ್ದು. ಇವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ 1983ರಲ್ಲಿ ಚುನಾವಣೆ ನಡೆದಿತ್ತು. ಇಡೀ ರಾಜ್ಯದಲ್ಲಿ ಪ್ರಚಾರ ಮಾಡಿ ವಿಧಾನಸಭೆಗೆ ಬಿ.ಎಸ್.ಯಡಿಯೂರಪ್ಪ, ವಿ.ಎಸ್.ಆಚಾರ್ಯ ಸೇರಿದಂತೆ 18 ಮಂದಿ ಬಿಜೆಪಿ ಸದಸ್ಯರನ್ನು ಪ್ರಥಮ ಬಾರಿಗೆ ಪ್ರವೇಶಿಸುವಂತೆ ಮಾಡಿದ್ದ ಕೀರ್ತಿ ಸುಬ್ಬಯ್ಯಗೆ ಸಲ್ಲಬೇಕು. ಸುಬ್ಬಯ್ಯ ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಕಾರಣಾಂತರಗಳಿಂದ 1984ರಲ್ಲಿ ಸುಬ್ಬಯ್ಯ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸಂಘಟಿಸಲು ಸುಬ್ಬಯ್ಯ ಕಾಣಿಕೆ ದೊಡ್ಡದಿತ್ತು. ಅವರ ಉಚ್ಚಾಟನೆ ಬೆಂಬಲಿಗರಿಗೆ ಆಕ್ರೋಶ ತರಿಸಿತ್ತು. ನಾಯಕರ ಒಳರಾಜಕೀಯ, ಕಚ್ಚಾಟದ ಬಗ್ಗೆ ದಿವಂಗತ ಅಟಲ್‌ ಬಿಹಾರಿ ವಾಜಪೇಯಿಗೆ ದೀರ್ಘ ಪತ್ರ ಬರೆದಿದ್ದರು. ಅದನ್ನು ಪುಸ್ತಕ ರೂಪದಲ್ಲೂ ಪ್ರಕಟಿಸಲಾಗಿದೆ.

ಸ್ವಂತ ಪಕ್ಷ ಕಟ್ಟಿದರೂ ಯಶಸ್ಸು ಸಿಗಲಿಲ್ಲ:1984ರಲ್ಲಿ ‘ಕನ್ನಡ ನಾಡು’ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ಆರ್ಥಿಕ ತೊಂದರೆಯಿಂದ ಆ ಪಕ್ಷ ಬೆಳೆಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಸೇರಿದರು. ಬಿಎಸ್‌ಪಿಯಲ್ಲೂ ಕೆಲವು ವರ್ಷ ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ ಸೇರಿದ ನಂತರ ಸುಬ್ಬಯ್ಯ ಅವರ ಹೋರಾಟಕ್ಕೆ ಮತ್ತೊಂದು ಆಯಾಮ ಸಿಕ್ಕಿತ್ತು ಎಂದು ಬಲ್ಲವರು ಹೇಳುತ್ತಾರೆ.

ಕಾಡಿದ್ದ ವಿವಾದ:ಸುಬ್ಬಯ್ಯರನ್ನೂ ವಿವಾದಗಳು ಬೆಂಬಿಡದೆ ಕಾಡಿದ್ದವು. ಒಮ್ಮೆ ವರನಟ ದಿವಂಗತ ಡಾ.ರಾಜ್‌ಕುಮಾರ್‌ ಅವರ ಬೆಂಬಲಿಗರ ವಿರೋಧ ಕಟ್ಟಿಕೊಂಡಿದ್ದರು. ಸುಬ್ಬಯ್ಯ ಹೊರಗೆ ಹೋದರೆ ಸಾಕು ಕಾರಿನ ಮೇಲೆ ರಾಜ್‌ ಅಭಿಮಾನಿಗಳು ಕಲ್ಲು ತೂರುತ್ತಿದ್ದರು. ಕೊನೆಗೆ ಆ ವಿವಾದಕ್ಕೆ ತೆರೆಬಿತ್ತು. ಅದಲ್ಲದೆ ಕೊಡಗಿನಲ್ಲೂ ಕೆಲವು ವರ್ಗದವರ ವಿರೋಧ ಎದುರಿಸಬೇಕಾಯಿತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು, ಟಿಪ್ಪು ಜಯಂತಿ ಜಾರಿಗೆ ತಂದಿತ್ತು. ಅದನ್ನು ಸಮರ್ಥಿಸಿದ್ದರು. ಇದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿತ್ತು.

ವಿಡಿಯೊ ಕೃಪೆ: facebook.com/thedeccannews

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.