ADVERTISEMENT

‘ಆರೋಗ್ಯ’ ಕೈತಪ್ಪಿದ್ದಕ್ಕೆ ಶ್ರೀರಾಮುಲು ಅಸಮಾಧಾನ; ಸುಧಾಕರ್‌ಗೆ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 10:08 IST
Last Updated 12 ಅಕ್ಟೋಬರ್ 2020, 10:08 IST
ಸಚಿವರಾದ ಬಿ.ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್
ಸಚಿವರಾದ ಬಿ.ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಿರಿಯ ಸಚಿವ ಬಿ.ಶ್ರೀರಾಮುಲು ಅವರಿಂದ ಆರೋಗ್ಯ ಖಾತೆಯನ್ನು ಹಿಂಪಡೆದು, ಸಮಾಜಕಲ್ಯಾಣ ಖಾತೆಯನ್ನು ನೀಡಿದ್ದಾರೆ. ಇದರಿಂದ ಬೇಸರಗೊಂಡಿರುವ ಶ್ರೀರಾಮುಲು ಬದಲಾವಣೆಗೆ ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಆರೋಗ್ಯ ಖಾತೆ ಹಂಚಿಕೆ ಮಾಡಲಾಗಿದೆ. ಈವರೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ಹೊಂದಿದ್ದ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರ ಬಳಿ ಲೋಕೋಪಯೋಗಿ ಖಾತೆ ಮಾತ್ರ ಉಳಿದಿದೆ.

ಖಾತೆ ಬದಲಾವಣೆ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ. ಶ್ರೀರಾಮುಲು ಅವರಿಗೆ ಸಮಾಜಕಲ್ಯಾಣ ಖಾತೆಯ ಜತೆಗೆ ಹಿಂದುಳಿದ ವರ್ಗಗಳ ಖಾತೆಯೂ ಇರಲಿದೆ ಎಂದು ಹೇಳಲಾಗಿತ್ತು. ಆದರೆ, ಹಿಂದುಳಿದ ವರ್ಗಗಳ ಖಾತೆಯನ್ನು ಮುಖ್ಯಮಂತ್ರಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ADVERTISEMENT

ರಾಮುಲುಗೆ ಬೇಸರ ಏಕೆ?
ಶ್ರೀರಾಮುಲು ಅವರಿಗೆ ಮಹತ್ವದ ಸಮಾಜ ಕಲ್ಯಾಣ ಖಾತೆ ನೀಡಿದ್ದರೂ ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಸಮಾಜಕಲ್ಯಾಣ ಇಲಾಖೆಯಲ್ಲ. ಆದರೆ, ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಖಾತೆಯಿಂದ ತಮ್ಮನ್ನು ಬದಲಾವಣೆ ಮಾಡಿದ್ದರಿಂದ ತಾವು ಅಸಮರ್ಥ ಎಂಬ ಸಂದೇಶ ಸಾರ್ವಜನಿಕವಾಗಿ ರವಾನೆ ಆಗುತ್ತದೆ ಎಂಬ ಅಳಕು ಅವರನ್ನು ಕಾಡಿದೆ.

ಖಾತೆ ಬದಲಾವಣೆ ಮಾಹಿತಿ ಬೆಳಿಗ್ಗೆ ಗೊತ್ತಾಗುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸಿದ ಶ್ರೀರಾಮುಲು ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೆ ಖಾತೆ ಬದಲಾವಣೆ ಮಾಡುವುದು ಬೇಡ. ಇದರಿಂದ ಸಾರ್ವಜನಿಕರ ಮಧ್ಯೆ ತಪ್ಪು ಸಂದೇಶ ಹೋಗುತ್ತದೆ. ಇದರಿಂದ ವರ್ಚಸ್ಸಿಗೆ ಕುಂದುಂಟಾಗುತ್ತದೆ. ಆದ್ದರಿಂದ ಬದಲಾವಣೆ ಒಪ್ಪಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಖಾತೆ ಬದಲಾವಣೆ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ. ನೀವು ಅಸಮರ್ಥ ಎಂಬ ಕಾರಣಕ್ಕೆ ಬದಲಾವಣೆ ಮಾಡಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಉಪಚುನಾವಣೆ ಬಳಿಕ ಖಾತೆ ಬದಲಾವಣೆ ಆಗಬೇಕಿದೆ. ಆರೋಗ್ಯ ಮತ್ತು ವೈದ್ಯಶಿಕ್ಷಣ ಒಬ್ಬರ ಬಳಿ ಇದ್ದರೆ ಸೂಕ್ತ. ಮೇಲಾಗಿ ಸುಧಾಕರ್‌ ವೃತ್ತಿಯಲ್ಲಿ ವೈದ್ಯರೂ ಆಗಿರುವುದರಿಂದ ನಿರ್ವಹಣೆ ಸುಗಮ ಆಗುತ್ತದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸಂಜೆಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಶ್ರೀರಾಮುಲು ನಿರ್ಧರಿಸಿದ್ದಾರೆ. ಸಂಜೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರು ಖಾತೆ ಬದಲಾವಣೆ ವಿಚಾರವನ್ನು ಶ್ರೀರಾಮುಲು ಅವರ ಗಮನಕ್ಕೆ ತಂದಿದ್ದರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಸುಧಾಕರ್‌, ‘ಆರೋಗ್ಯ ಖಾತೆಯ ಬದಲಾವಣೆಯನ್ನು ಶ್ರೀರಾಮುಲು ಅವರ ಗಮನಕ್ಕೆ ತಂದು ಮಾಡಲಾಗಿದೆಯೇ ಎಂಬುದನ್ನು ಮುಖ್ಯಮಂತ್ರಿಯವರನ್ನು ಕೇಳಬೇಕು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ ಆಗಿದೆ. ಎರಡೂ ಖಾತೆ ಪರಸ್ಪರ ಪೂರಕವಾಗಿರುವುದರಿಂದ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸುದ್ದಿಗಾರರ ಜತೆ ಮಾತನಾಡಿ, ಸಮಾಜ ಕಲ್ಯಾಣ ನನ್ನ ಬಳಿ ಹೆಚ್ಚುವರಿಯಾಗಿತ್ತು. ಅದನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಿಗೇ ನೀಡಿರುವ ಕ್ರಮ ಸರಿಯಾಗಿಯೇ ಇದೆ. ಇದರಿಂದ ಯಾರಿಗೂ ಬೇಸರ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.