ADVERTISEMENT

ಡೆಲ್ಟಾ ಪ್ಲಸ್ ಸೋಂಕು | ರಾಜ್ಯಕ್ಕೆ ಬಂದವರಿಗೆ ಪರೀಕ್ಷೆ: ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 16:39 IST
Last Updated 27 ಜೂನ್ 2021, 16:39 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ‘ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ತಳಿಯ ವೈರಾಣು ಕಾಣಿಸಿಕೊಂಡ ಕಾರಣ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ರಾಜ್ಯ ಪ್ರವೇಶಿಸುವವರಿಗೆ ರ್‍ಯಾಂಡಮ್‌ ಆಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಬೇರೆ ರಾಜ್ಯಗಳಿಂದ ಬರುವವರನ್ನು ನೂರಕ್ಕೆ ನೂರು ವೈದ್ಯಕೀಯ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಾಧ್ಯವಾದಷ್ಟು ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ಒಂದರಿಂದಲೇ ಲಕ್ಷಾಂತರ ಜನರು ರಾಜ್ಯಕ್ಕೆ ಬರುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸಾಧ್ಯವಾದಷ್ಟು ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದರು.

‘ಕೋವಿಡ್ ಹೊಸ ವೈರಾಣು ನಿಯಂತ್ರಣಕ್ಕೆ ವೈರಾಣುವಿನ ಅನುಕ್ರಮಣಿಕೆ ನಡೆಸಲಾಗುತ್ತಿದೆ. 600 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈವರೆಗೆ ರಾಜ್ಯದಲ್ಲಿ ಇಬ್ಬರಿಗೆ ಮಾತ್ರ ಡೆಲ್ಟಾ ಪ್ಲಸ್ ವೈರಾಣು ತಗುಲಿರುವುದು ದೃಢಪಟ್ಟಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ 50 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ದೇಶದ ಯಾವುದೇ ನಗರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿಲ್ಲ. ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ 40 ರಷ್ಟಿದೆ (1.85 ಕೋಟಿ). 45 ಲಕ್ಷಕ್ಕೂ ಅಧಿಕ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಕರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.