ADVERTISEMENT

ಕಬಿನಿ ನಿಯಂತ್ರಣಕ್ಕೆ; ಕಾವೇರಿ ಉಲ್ಬಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:15 IST
Last Updated 11 ಆಗಸ್ಟ್ 2019, 20:15 IST
ಕಾವೇರಿ ನದಿಯ ಪ್ರವಾಹದಿಂದ ತಿ.ನರಸೀಪುರ– ತಲಕಾಡು ಸಂಪರ್ಕಿಸುವ ಹೆಮ್ಮಿಗೆ ಸೇತುವೆ ಜಲಾವೃತವಾಗಿದೆ – ತಲಕಾಡು ವೆಂಕಟೇಶಮೂರ್ತಿ
ಕಾವೇರಿ ನದಿಯ ಪ್ರವಾಹದಿಂದ ತಿ.ನರಸೀಪುರ– ತಲಕಾಡು ಸಂಪರ್ಕಿಸುವ ಹೆಮ್ಮಿಗೆ ಸೇತುವೆ ಜಲಾವೃತವಾಗಿದೆ – ತಲಕಾಡು ವೆಂಕಟೇಶಮೂರ್ತಿ   

ಮೈಸೂರು: ಕಬಿನಿ ನದಿ ಪ್ರವಾಹ ಭಾನುವಾರ ನಿಯಂತ್ರಣಕ್ಕೆ ಬಂದಿದ್ದರೆ, ಕಾವೇರಿ ನದಿ ಮಟ್ಟ ಅಪಾಯದ ಅಂಚು ತಲುಪಿದ್ದು, ಶ್ರೀರಂಗಪಟ್ಟಣ, ತಿ.ನರಸೀಪುರ, ತಲಕಾಡು, ಕೊಳ್ಳೇಗಾಲ ಭಾಗಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಕೆಆರ್‌ಎಸ್‌ ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ಕಾವೇರಿ ಸಾಯಿಧಾಮ, ಚಂದ್ರವನ, ಗೌತಮ ಕ್ಷೇತ್ರಗಳು ಜಲಾವೃತವಾಗಿವೆ. ನದಿ ದಂಡೆಯಲ್ಲಿರುವ 6 ದೇವಾಲಯಗಳು, ಪಶ್ಚಿಮ ವಾಹಿನಿ ಇತರೆಡೆ ಮೂರು ಮನೆಗಳು ಮುಳುಗಿವೆ.

ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ತಳ ಮುಚ್ಚಿದೆ. ಹೆಮ್ಮಿಗೆ ಸೇತುವೆ ಜಲಾವೃತವಾಗಿರುವುದರಿಂದ ತಿ.ನರಸೀಪುರ– ತಲಕಾಡು ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ADVERTISEMENT
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಜಲಾವೃತವಾಗಿದೆ

ಕೊಳ್ಳೇಗಾಲ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದೆ. ದಾಸನಪುರದಿಂದ ಸುರಕ್ಷಿತ ಸ್ಥಳದತ್ತ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ನೀರಿಗೆ ಬಿದ್ದ ದಂಪತಿ ಹಾಗೂ ಮಗುವನ್ನು ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು.

ಕೊಡಗಿನಲ್ಲಿ ವರುಣನ ಅಬ್ಬರ ತಗ್ಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಪ್ರವಾಹ ಸ್ಥಿತಿಯಿದೆ.

ದಕ್ಷಿಣ ಕನ್ನಡದಲ್ಲಿ ಪ್ರವಾಹ ತಗ್ಗಿದರೂ ಸಂಚಾರ ಸಂಕಷ್ಟ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಶನಿವಾರ 11.6 ಮೀಟರ್ ಇದ್ದ ನೇತ್ರಾವತಿ ನದಿಯ ನೀರಿನ ಮಟ್ಟ, ಭಾನುವಾರ ಬೆಳಿಗ್ಗೆ 9 ಮೀಟರ್‌ಗೆ ಇಳಿದಿದೆ.

ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಬಳಿ ಶನಿವಾರ ಬೆದ್ರಾಳ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಜನಾರ್ದನ (30) ಎಂಬುವವರ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಉಳ್ಳಾಲದ ಉಚ್ಚಿಲ, ಸೋಮೇಶ್ವರದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಬೆಂಗಳೂರು–ಮಂಗಳೂರು ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಕೇರಳದಿಂದ ಮಂಗಳೂರಿನ ಮೂಲಕ ಮುಂಬೈ, ಗುಜರಾತ್‌, ದೆಹಲಿಗೆ ಸಂಚರಿಸಬೇಕಿದ್ದ ರೈಲು ಸಂಚಾರ ರದ್ದುಪಡಿಸಲಾಗಿದೆ.

ಮೆಟ್ಟೂರಿಗೆ 31 ಅಡಿ ನೀರು ಬಿಡುಗಡೆ

ಮಹದೇಶ್ವರಬೆಟ್ಟ: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ 2.60 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರುಹೊರ ಬಿಡುತ್ತಿರುವುದರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ.

10 ದಿನಗಳಲ್ಲಿ 31 ಅಡಿಗಳಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. 120 ಅಡಿಗಳಷ್ಟು ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 70 ಅಡಿಗಳಷ್ಟು ನೀರಿದೆ. 10 ದಿನಗಳ ಹಿಂದೆ 39 ಅಡಿಗಳಷ್ಟು ನೀರಿತ್ತು ಎಂದು ಮೂಲಗಳು ತಿಳಿಸಿವೆ. ಅಣೆಕಟ್ಟೆಯಲ್ಲಿ ಸದ್ಯ 31 ಟಿಎಂಸಿ ಅಡಿಗಳಷ್ಟು ನೀರಿದೆ.

ಕೆಆರ್‌ಎಸ್‌ ಭರ್ತಿಗೆ ಕ್ಷಣಗಣನೆ: ಕೆಆರ್‌ಎಸ್‌ ಭರ್ತಿಗೆ ಕ್ಷಣ ಗಣನೆ ಆರಂಭವಾಗಿದೆ. ಜಲಾಶಯದಲ್ಲಿ ಭಾನುವಾರ ಸಂಜೆ 121 ಅಡಿ ನೀರು ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.