
ಬೆಂಗಳೂರು: ‘ನಮ್ಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ತೆಗೆದುಕೊಳ್ಳಿ’ ಎಂದು ಕಾಡುಗೊಲ್ಲ ಸಮುದಾಯದ ಮುಖಂಡರ ನಿಯೋಗವು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ.
ಚಿತ್ರದುರ್ಗದ ಯಾದವಾನಂದ ಮಠದ ಪೀಠಾಧ್ಯಕ್ಷ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸೋಮಣ್ಣ ಅವರನ್ನು ಶನಿವಾರ ಭೇಟಿ ಮಾಡಿದರು.
‘ರಾಜ್ಯ ಸರ್ಕಾರವು ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನ ಮಾಡಿದ್ದು, ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತನ್ನಿ’ ಎಂದು ಕೋರಿದರು.
ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ‘ರಾಜ್ಯದ ಎಲ್ಲೆಡೆ ಇರುವ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಬೇಕಾದರೆ, ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕಾಗಿದೆ. ಈ ಸಂಬಂಧ ತಾವು ಒತ್ತಡ ತಂದು ಕೆಲಸ ಮಾಡಿಸಿಕೊಡಬೇಕು’ ಎಂದು ಕೋರಿದರು.
ಸಚಿವ ಸೋಮಣ್ಣ, ‘ಕಾಡುಗೊಲ್ಲ ಸಮುದಾಯದ ಸಂಘಟನೆಗಳು ಭಿನ್ನಾಭಿಪ್ರಾಯವನ್ನು ಬಿಟ್ಟು, ಒಟ್ಟಾಗಿ ಕೆಲಸ ಮಾಡಬೇಕು. ಸಮುದಾಯದ ಮಕ್ಕಳು ಶಿಕ್ಷಣ ಪಡೆದುಕೊಳ್ಳಲು ಪ್ರೋತ್ಸಾಹ ನೀಡಬೇಕು’ ಎಂದರು.
ತುಮಕೂರು ಜಿಲ್ಲಾ ಕಾಡುಗೊಲ್ಲ ಸಂಘದ ಅಧ್ಯಕ್ಷ ಚಂಗಾವಾರ ಕರಿಯಪ್ಪ, ವಿಶ್ವರೂಪ ಕಾಡುಗೊಲ್ಲ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸಿ.ಕುಮಾರ್. ಚಿತ್ರದುರ್ಗ ಜಿಲ್ಲಾ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ರೇವಣ್ಣ ಸಿದ್ದಪ್ಪ ಅವರು ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.