ADVERTISEMENT

ಕಳಸಾ- ಬಂಡೂರಿ: ಹೊಸ ಪ್ರಸ್ತಾವನೆಗೆ ಸೂಚನೆ

ಕೇಂದ್ರ ಅರಣ್ಯ, ಪರಿಸರ ಇಲಾಖೆಯಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 17:06 IST
Last Updated 10 ಜುಲೈ 2020, 17:06 IST
ಮಹದಾಯಿ ನದಿ
ಮಹದಾಯಿ ನದಿ   

ಬೆಂಗಳೂರು: ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಪರಿಸರ ಅನುಮತಿ ಕೋರಿ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಬೆಳಗಾವಿ ಜಿಲ್ಲೆಯ ಕಣಕುಂಬಿ ಗ್ರಾಮದ ಬಳಿ ಕಳಸಾ ನಾಲಾಕ್ಕೆ ಅಣೆಕಟ್ಟೆ ನಿರ್ಮಿಸಲು 258 ಹೆಕ್ಟೇರ್‌ ಅರಣ್ಯ ಭೂಮಿ ಮತ್ತು ಬಂಡೂರ ನಾಲೆ ನಿರ್ಮಾಣಕ್ಕೆ 243 ಹೆಕ್ಟೇರ್‌ ಅರಣ್ಯ ಭೂಮಿ ಬಳಕೆಯಾಗಲಿದೆ. ಇದಕ್ಕೆ ಪರಿಸರ ಇಲಾಖೆಯ ಅನುಮತಿ ಅಗತ್ಯವಿದೆ.

ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮಧ್ಯೆ ಈ ಯೋಜನೆಗೆ ಸಂಬಂಧಿಸಿದಂತೆ ವಿವಾದ ಇದ್ದ ಕಾರಣ 2003 ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿತ್ತು. ಹೀಗಾಗಿ ಇಲಾಖೆಯ ಮುಂದೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ. ಆದ್ದರಿಂದ, ಮೊದಲನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆನ್‌ಲೈನ್‌ ಪೋರ್ಟಲ್‌ ‘ಪರಿವೇಶ್’‌ ಮೂಲಕ ಮತ್ತೊಮ್ಮೆ ಸಲ್ಲಿಸುವಂತೆ ಸೂಚಿಸಿದೆ.

ADVERTISEMENT

ತಕರಾರು ಇಲ್ಲ ಎಂದಿದ್ದ ಕೇಂದ್ರ: 2019ರ ಅಕ್ಟೋಬರ್‌ 17ರಂದು ಕೇಂದ್ರ ಅರಣ್ಯ, ಪರಿಸರ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ‘ಇದು ಕುಡಿಯುವ ನೀರು ಯೋಜನೆ ಆಗಿರುವುದರಿಂದ ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006 ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಯಾವುದೇ ತಕರಾರು ಇಲ್ಲ’ ಎಂದು ಹೇಳಿತ್ತು.

‘ಜಲ ವಿದ್ಯುತ್‌ ಅಥವಾ ನೀರಾವರಿ ಯೋಜನೆ ಹಾಗೂ ಹೊಸ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹಾಯಿಸುವ ಉದ್ದೇಶ ಯೋಜನೆ ಒಳಗೊಂಡಿಲ್ಲ. ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಲು ಆಕ್ಷೇಪ ಇಲ್ಲ. ಕರ್ನಾಟಕ ಸರ್ಕಾರ ಯೋಜನೆ ಆರಂಭಿಸಲು ಅಭ್ಯಂತರ ಇಲ್ಲ’ ಎಂದು ಪತ್ರದಲ್ಲಿ ತಿಳಿಸಿತ್ತು.

ಈಗ ಮತ್ತೆ ಪತ್ರ ಬರೆದು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿರುವುದರಿಂದ ಯೋಜನೆಗೆ ಮೊದಲ ಹಂತದಿಂದಲೇ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.