ADVERTISEMENT

ಬೆಳಗಾವಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾಳೆ ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 19:30 IST
Last Updated 17 ಜುಲೈ 2018, 19:30 IST

ಬೆಳಗಾವಿ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ, ಪುಣೆಯ ಅಮೋಲ್ ಕಾಳೆ ಇಲ್ಲಿನ ಖಡೇಬಜಾರ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಎನ್ನುವ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.

ಸಾಮಾನ್ಯ ಸಾಮಾಜಿಕ ಕಾರ್ಯಕರ್ತನ ಸೋಗಿನಲ್ಲಿ ಇಲ್ಲಿರುತ್ತಿದ್ದ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಸಂಪರ್ಕ ಸಾಧಿಸಲು ಬೆಳಗಾವಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದ ಎಂದು ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಆದರೆ, ಇಲ್ಲಿ ಯಾವ ಮನೆಯಲ್ಲಿದ್ದ, ಎಷ್ಟು ದಿನ ವಾಸವಿದ್ದ ಎನ್ನುವುದು ಖಚಿತವಾಗಿಲ್ಲ. ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇಲ್ಲ.

ಮೇ ಕೊನೆ ವಾರದಲ್ಲಿ ಅಮೋಲ್ ಕಾಳೆಯನ್ನು ಎಸ್‌ಐಟಿಯವರು ಪುಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಹಿಂದುತ್ವವಾದಿ ಯುವಕರನ್ನು ಸೆಳೆಯಲು ಹಾಗೂ ಕರ್ನಾಟಕ ಮತ್ತು ಗೋವಾದಲ್ಲಿ ಚಟುವಟಿಕೆಗಳನ್ನು ನಡೆಸಲು, ತನಗೆ ಬೇಕಾದವರನ್ನು ಭೇಟಿಯಾಗಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ವಾಸವಿದ್ದ ಎನ್ನಲಾಗುತ್ತಿದೆ. ಇಲ್ಲಿಂದ ಪುಣೆ, ಗೋವಾಕ್ಕೆ ಆಗಾಗ ಓಡಾಡುತ್ತಿದ್ದ ಎಂದು ತಿಳಿದುಬಂದಿದೆ.

ADVERTISEMENT

ಪ್ರಕರಣದ ಆರೋಪಿಗಳಾದ ಪರುಶರಾಮ ವಾಘ್ಮೋರೆ, ನವೀನ್‌ಕುಮಾರ್‌ ಬೆಳಗಾವಿಯಲ್ಲಿ ಕಾಳೆಯನ್ನು ಭೇಟಿಯಾಗಿದ್ದರು ಎನ್ನಲಾಗುತ್ತಿದೆ.

‘ಬೆಳಗಾವಿಯಲ್ಲಿ ಬಂದೂಕು ತರಬೇತಿ ನೀಡಲಾಗಿತ್ತು’ ಎಂದು ಆರೋಪಿ ಪರುಶರಾಮ ವಾಘ್ಮೋರೆ ವಿಚಾರಣೆ ವೇಳೆ ತಿಳಿಸಿದ್ದ. ಇದನ್ನು ಆಧರಿಸಿ, ಎಸ್ಐಟಿಯವರು ಆತನನ್ನು ಕೆಲವು ದಿನಗಳ ಹಿಂದೆಯಷ್ಟೇ ನಗರಕ್ಕೆ ಕರೆತಂದಿದ್ದರು. ಬಂದೂಕು ತರಬೇತಿ ನೀಡಲಾಗಿತ್ತು ಎನ್ನಲಾದ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದರು.

‘ಅಮೋಲ್ ಕಾಳೆ ಇಲ್ಲಿ ವಾಸವಾಗಿದ್ದ ಎನ್ನುವ ಕುರಿತು ನಮಗೆ ಮಾಹಿತಿ ಇಲ್ಲ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯವರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.