ADVERTISEMENT

ಪರವಾನಗಿ ಪಡೆದೇ ಕಾಳಿಂಗ ಸಂಶೋಧನೆ: ಕಾಳಿಂಗ ಮನೆ ಟ್ರಸ್ಟಿಗಳು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 15:20 IST
Last Updated 23 ಅಕ್ಟೋಬರ್ 2025, 15:20 IST
<div class="paragraphs"><p>ಕಾಳಿಂಗ ಸರ್ಪಚಿತ್ರ </p></div>

ಕಾಳಿಂಗ ಸರ್ಪಚಿತ್ರ

   

ವೈಲ್ಡ್‌ ಕರ್ನಾಟಕ

ಬೆಂಗಳೂರು: ‘ಕಾಳಿಂಗ ಸ‌ರ್ಪಗಳ ಅಧ್ಯಯನ ಮತ್ತು ಇತರ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯ ಪರವಾನಗಿ ಪಡೆದು, ಕಾನೂನು ಬದ್ಧವಾಗಿಯೇ ನಡೆಸಲಾಗುತ್ತಿದೆ’ ಎಂದು ಕಾಳಿಂಗ ಮನೆ ಟ್ರಸ್ಟಿಗಳಾದ ಶರ್ಮಿಳಾ ರಾಜಶೇಖರನ್ ಮತ್ತು ಶೌಕತ್‌ ಜಮಾಲ್‌ ಹೇಳಿದ್ದಾರೆ.

ADVERTISEMENT

ಕಾಳಿಂಗ ಸರ್ಪದ ಅಧ್ಯಯನದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಗಳಿಗೆ ಸ್ಪಷ್ಟನೆ ನೀಡಿರುವ ಅವರು, ‘ಕಾಳಿಂಗ ಫೌಂಡೇಶನ್‌ ಮತ್ತು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೂ (ಎಆರ್‌ಆರ್‌ಎಸ್‌) ಯಾವುದೇ ಸಂಬಂಧ ಇಲ್ಲ. ನಮ್ಮ ಸಂಸ್ಥೆ(ಕಾಳಿಂಗ ಫೌಂಡೇಶನ್) ಸಂಶೋಧನೆ, ಸಂರಕ್ಷಣೆ ಮತ್ತು ಪರಿಸರ ಶಿಕ್ಷಣಕ್ಕಾಗಿ ಮುಡಿಪಾಗಿದೆ’ ಎಂದು ತಿಳಿಸಿದ್ದಾರೆ.

‘ಕಾಳಿಂಗ ಸರ್ಪಗಳ ಸಂಶೋಧನೆಯನ್ನು ಕೇವಲ ವೈಜ್ಞಾನಿಕ ಸಂಶೋಧನೆಗೆ ಸೀಮಿತಗೊಳಿಸದೇ ಅದನ್ನು ಜನಸಾಮಾನ್ಯರ ಹಿತಕ್ಕಾಗಿಯೂ ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಮಾನವ– ಹಾವಿನ ಸಂಘರ್ಷ ಸಂಪೂರ್ಣವಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ನಿಂತಿದೆ. ಈ ವಿಷಯವನ್ನು ಬಹು ಎಚ್ಚರಿಕೆಯಿಂದ ದಾಖಲೆ ಮಾಡುವ ಅಗತ್ಯವಿದೆ. ನಮ್ಮ ದತ್ತಾಂಶವು ಹಲವು ವರ್ಷಗಳಿಂದ ಸಂಗ್ರಹಿಸಿ, ಪರಿಶೀಲಿಸಿದ ಕ್ಷೇತ್ರ ಅಧ್ಯಯನಗಳಿಂದ ಬಂದಿದೆ. ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರೂ ಇದ್ದಾರೆ. ಅವರು ಹಾವಿನೊಂದಿಗೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಯನ್ನಾಗಲಿ, ಪೂಜನೀಯ ಭಾವನೆಯನ್ನು ಹೊಂದಿಲ್ಲ. ತಮಗೆ ವಿಪತ್ತು ಬಂದಾಗ ಯಾವುದೇ ಹಾವನ್ನಾದರೂ ಕೊಲ್ಲಲು ಅವರು ಸಿದ್ಧರಾಗುತ್ತಾರೆ. ಅದೇ ರೀತಿ ನಾವು ಕಲೆ ಹಾಕುವ ದತ್ತಾಂಶವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಪರಾಮರ್ಶಿಸುತ್ತಾರೆ’ ಎಂದು ಹೇಳಿದ್ದಾರೆ.

‘ಕಾಳಿಂಗಗಳಿಗೆ ಅಳವಡಿಸಿದ ಪಿಟ್‌ಟ್ಯಾಗ್‌ ಕುರಿತಾದ ಯಾವುದೇ ವೈಜ್ಞಾನಿಕ ಪ್ರಬಂಧವನ್ನು Hamadryad ಜರ್ನಲ್‌ನಲ್ಲಿ ನಾವು ಪ್ರಕಟ ಮಾಡಿಲ್ಲ. ರೇಡಿಯೊ ಟೆಲಿಮೆಟ್ರಿಗೆ ಸಂಬಂಧಿಸಿದ ಕೆಲ ವೈಜ್ಞಾನಿಕ ಪ್ರಬಂಧಗಳು ಪ್ರಕಟವಾಗಿವೆ. ಅಲ್ಲದೇ, ಪಿಐಟಿ ಕಾರ್ಯ ವಿಧಾನ ಬಳಸಿ ಮಾಡಿದ ಯೋಜನೆ ಸಂಪೂರ್ಣವಾಗಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೆ ಸಂಬಂಧಿಸಿದ್ದು, ಈ ಯೋಜನೆಗೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಭಾರತದಲ್ಲಿ ಪ್ರತಿ ವರ್ಷ ಅಂದಾಜು 58 ಸಾವಿರದಿಂದ 60 ಸಾವಿರ ಜನ ಹಾವು ಕಚ್ಚಿ ಸಾಯುತ್ತಾರೆ. ಈ ಸಂಖ್ಯೆ ಕರ್ನಾಟಕದಲ್ಲಿ 2,500 ರಿಂದ 3,000 ದಷ್ಟಿದೆ. ಸಂರಕ್ಷಕರು ಹಾವನ್ನು ಸಂರಕ್ಷಣೆ ಮಾಡದೇ ಇದ್ದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಜನರೂ ಸಹ ಹಾವಿನ ಭೀತಿಯಿಂದ ಇನ್ನೂ ಹೆಚ್ಚು ಹಾವುಗಳನ್ನು ಕೊಲ್ಲಬಹುದು’ ಎಂದು ಶರ್ಮಿಳಾ ಮತ್ತು ಶೌಕತ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.