ವಿಧಾನಸೌಧ
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ತಿಂಗಳ ಒಳಗೆ ತನಿಖೆ ನಡೆಸಿದ ವರದಿ ಸಲ್ಲಿಸಬೇಕು. ತನಿಖೆಗೆ ಅಗತ್ಯ ಇರುವ ಮಾನವ ಸಂಪನ್ಮೂಲ, ಕಚೇರಿ, ವಾಹನ ಇತ್ಯಾದಿ ವ್ಯವಸ್ಥೆಗಳನ್ನು ಕೆಕೆಆರ್‌ಡಿಬಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಒದಗಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮಗಳು ನಡೆದಿದೆ ಎಂದು ಬಂದಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ್ದ, ಅಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಇ.ವಿ. ರಮಣ ರೆಡ್ಡಿ (ಈಗ ನಿವೃತ್ತ) ಅವರು ವರದಿ ನೀಡಿದ್ದರು. ಆ ವರದಿ ಪರಿಶೀಲಿಸಿ, ಹೆಚ್ಚಿನ ತನಿಖೆ ನಡೆಸಲು ಸುಧೀರ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಸರ್ಕಾರ ₹ 45 ಕೋಟಿಯಲ್ಲಿ 315 ಹೊಸ ಬಸ್ ಖರೀದಿಸಲು ಅನುಮೋದನೆ ನೀಡಿದ್ದರೂ ಆ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿರುವುದು, 47 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ 37 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಡಳಿಯು ಮಂಜೂರಾತಿ ನೀಡಿರುವುದು, 815 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದರೂ ಅನುಷ್ಠಾನಗೊಳಿಸದಿರುವುದೂ ಸೇರಿದಂತೆ ಒಟ್ಟು ಎಂಟು ಆರೋಪಗಳನ್ನು ಮಾಡಲಾಗಿತ್ತು. ನಿಯಮ ಉಲ್ಲಂಘಿಸಿ ಅನುದಾನ ಮಂಜೂರು ಮತ್ತು ದುರ್ಬಳಕೆಯ ಆರೋಪಗಳನ್ನು ಸಂಘದ ಮೇಲೆ ಮಾಡಲಾಗಿತ್ತು. ಈ ಆರೋಪಗಳ ಕುರಿತು ರಮಣ ರೆಡ್ಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ಅಕ್ರಮ ಆರೋಪಗಳ ಕುರಿತು ‘ಪ್ರಜಾವಾಣಿ’ 2023ರ ಜೂನ್ 12 ಮತ್ತು ಜುಲೈ 12ರಂದೇ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.