ADVERTISEMENT

ಕನ್ನಡದಲ್ಲಿ ಪಿಯು ವಿಜ್ಞಾನ ಕಲಿಕೆ

ಮೈಸೂರಿನಲ್ಲೊಂದು ಹೊಸ ಪ್ರಯೋಗ–ಪ್ರವೇಶಾತಿ ಆರಂಭ

ಕೆ.ಓಂಕಾರ ಮೂರ್ತಿ
Published 9 ಮೇ 2019, 18:16 IST
Last Updated 9 ಮೇ 2019, 18:16 IST
ನೃಪತುಂಗ ಕಾಲೇಜಿನ ಕಟ್ಟಡ
ನೃಪತುಂಗ ಕಾಲೇಜಿನ ಕಟ್ಟಡ   

ಮೈಸೂರು: ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ವಿಷಯ ಬೋಧಿಸುವ ರಾಜ್ಯದ ಮೊದಲ ಪದವಿಪೂರ್ವ ಕಾಲೇಜು, ಮೈಸೂರಿನಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಕಾರ್ಯಾರಂಭ ಮಾಡಲಿದೆ.

ಇದೊಂದು ಹೊಸ ಪ್ರಯೋಗವಾಗಿದ್ದು, ರಾಮಕೃಷ್ಣನಗರದಲ್ಲಿರುವ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಈ ಪ್ರಯತ್ನಕ್ಕೆ ಕೈ ಹಾಕಿದೆ.

ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವ ಈ ಹೊತ್ತಿನಲ್ಲಿ ಸಂಸ್ಥೆಯ ಪ್ರಯತ್ನ ಗಮನ ಸೆಳೆಯುತ್ತಿದೆ.

ADVERTISEMENT

ಸಂಸ್ಥೆಯು ಈಗಾಗಲೇ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು, ಈಗ ‘ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು’ ಆರಂಭಿಸಿದೆ. ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಎರಡು ವಿಭಾಗಗಳಿಗೆ ಇದುವರೆಗೆ ಒಟ್ಟು 14 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ ಮತ್ತು ಕಂಪ್ಯೂಟರ್‌ ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಇಲ್ಲಿ ಕನ್ನಡದಲ್ಲೇ ಕಲಿಯಬಹುದಾಗಿದೆ. ಪ್ರಥಮ ವರ್ಷದ ಪಠ್ಯಪುಸ್ತಕಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಕನ್ನಡದಲ್ಲೇ ಸಿದ್ಧಪಡಿಸಿದ್ದು, ಕಂಪ್ಯೂಟರ್‌ ಪಠ್ಯವನ್ನು ತಜ್ಞರ ನೆರವಿನಿಂದ ಸಂಸ್ಥೆಯೇ ಅನುವಾದಿಸಿದೆ. ಪರೀಕ್ಷೆಯೂ ಕನ್ನಡದಲ್ಲೇ ನಡೆಯಲಿದೆ.

‘ಕನ್ನಡದಲ್ಲಿ ವಿಜ್ಞಾನ ಕಲಿಸುವ ಕಾಲೇಜು ನಿರ್ಮಿಸಬೇಕೆಂಬುದು ಬಹು ದಿನಗಳ ಕನಸಾಗಿತ್ತು. ಪೋಷಕರ ಮನಸ್ಥಿತಿ ಬದಲಿಸುವ ನಿಟ್ಟಿನಲ್ಲಿ ಹಾಗೂ ಕನ್ನಡದಲ್ಲಿಯೂ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಲು ಈ ಪ್ರಯತ್ನಕ್ಕೆ ಕೈಹಾಕಿದ್ದೇವೆ’ ಎಂದು ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ₹ 10 ಸಾವಿರ, ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಳ್ಳುವವರಿಗೆ ₹ 8 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ 10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಕಾಲೇಜು ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಅದರಲ್ಲಿ ₹ 1 ಕೋಟಿ ಮಂಜೂರಾಗಿದ್ದು, ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ₹ 25 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಪ್ರಯೋಗಾಲಯ ತೆರೆಯಲಾಗಿದೆ. ಹಲವಾರು ವರ್ಷಗಳ ಬೋಧನಾ ಅನುಭವವುಳ್ಳ, ನಿವೃತ್ತ ಪ್ರಾಧ್ಯಾಪಕರು ಇಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ.

‘ಕನ್ನಡದಲ್ಲಿ ವಿಜ್ಞಾನ ಕಲಿಕೆಗೆ ಯಾವುದೇ ತೊಂದರೆ ಇಲ್ಲ. ಕೆಲ ತಾಂತ್ರಿಕ ಅಂಶಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಸಾಧ್ಯವಿಲ್ಲ. ಆದರೆ, ಬೋಧನೆ ಮಾತ್ರ ಕನ್ನಡದಲ್ಲೇ ಇರಲಿದೆ. ಕನ್ನಡದಲ್ಲಿ ಕಲಿತ ಮಾತ್ರಕ್ಕೆ ನೀಟ್‌/ಸಿಇಟಿ ಪರೀಕ್ಷೆ ಬರೆಯಲು, ಉನ್ನತ ವ್ಯಾಸಂಗ ಮಾಡಲು ಕಷ್ಟವಾಗುತ್ತದೆ ಎಂಬುದು ತಪ್ಪು ಭಾವನೆ. ಅದಕ್ಕೆಂದು ಕಾಲೇಜಿನಲ್ಲಿ ವಿಶೇಷ ಇಂಗ್ಲಿಷ್‌ ಶಿಕ್ಷಣವನ್ನೂ ನೀಡಲಾಗುತ್ತದೆ. ಪ್ರತ್ಯೇಕ ಪಠ್ಯಕ್ರಮ ಸಿದ್ಧಗೊಳಿಸಲಾಗಿದೆ’ ಎಂದು ಕಾಲೇಜಿನ ಗೌರವ ಪ್ರಾಚಾರ್ಯ ಭದ್ರಪ್ಪ ಶಿ.ಹೆನ್ಲಿ ಪ್ರತಿಕ್ರಿಯಿಸಿದರು.

**
ಇಂಗ್ಲಿಷ್‌ ವ್ಯಾಮೋಹ ಆವರಿಸಿರುವ ಈ ಹೊತ್ತಿನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದ್ದೇವೆ. ಮಾತೃಭಾಷೆಯಲ್ಲೇ ಶಿಕ್ಷಣ ಸಿಗಬೇಕೆಂಬುದು ನಮ್ಮ ಸಿದ್ಧಾಂತ
-ಪ.ಮಲ್ಲೇಶ್‌,ಅಧ್ಯಕ್ಷ, ಕಾಲೇಜಿನ ಆಡಳಿತ ಮಂಡಳಿ

**
ನಮ್ಮ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಜೊತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ.
ಸ.ರ.ಸುದರ್ಶನ, ಕಾರ್ಯದರ್ಶಿ, ಕಾಲೇಜಿನ ಆಡಳಿತ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.