ADVERTISEMENT

ಎಸ್‌ಬಿಐಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್

ಕನ್ನಡದಲ್ಲಿ ಬರೆದ ಚೆಕ್ ನಗದಿಕರಿಸಲು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:42 IST
Last Updated 14 ನವೆಂಬರ್ 2018, 19:42 IST

ಸಾಗರ: ಕನ್ನಡದಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕೆ ಚೆಕ್ ಅನ್ನು ನಗದೀಕರಿಸಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಕೇಂದ್ರ ಕಚೇರಿ ಹಾಗೂ ಸ್ಥಳೀಯ ಶಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರಣ ಕೇಳಿ ನೋಟಿಸ್‌ ನೀಡಿದೆ.

ಸಿದ್ಧಿವಿನಾಯಕ ಅಡಿಕೆ ಸ್ಟೋರ್ಸ್‌ಗೆ ಸೇರಿದ ಚೆಕ್ ಅನ್ನು ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ನಗದೀಕರಿಸಲು ಬ್ಯಾಂಕ್ ನಿರಾಕರಿಸಿತ್ತು. ಕನ್ನಡದಲ್ಲಿ ಬರೆದಿರುವ ಚೆಕ್ ಅನ್ನು ನಗದೀಕರಿಸಲು ನಿರಾಕರಿಸಿರುವ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಬ್ಯಾಂಕ್‌ಗೆ ನೋಟಿಸ್ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಏಳು ದಿನಗಳೊಳಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಎಲ್ಲಾ ಇಲಾಖೆ, ಉದ್ದಿಮೆಗಳು ಕಡ್ಡಾಯವಾಗಿ ತ್ರಿಭಾಷಾ ಸೂತ್ರ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ. ಬ್ಯಾಂಕ್ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸುವುದು ಗ್ರಾಹಕರ ಹಿತದೃಷ್ಟಿಯಿಂದ ಕಡ್ಡಾಯ ಎಂದು ಪ್ರಾಧಿಕಾರ ನೀಡಿದ ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡದಲ್ಲಿ ಬರೆದಿದೆ ಎನ್ನುವ ಕಾರಣಕ್ಕೆ ಚೆಕ್ ಹಿಂತಿರುಗಿಸಿರುವುದು ತ್ರಿಭಾಷಾ ಸೂತ್ರದ ಉಲ್ಲಂಘನೆ. ಅಲ್ಲದೇ ಸ್ಥಳೀಯ ಭಾಷೆಯನ್ನು ಕಡೆಗಣಿಸುವ ಉದ್ಧಟತನದ ಧೋರಣೆ. ಇದು ಸ್ಥಳೀಯ ಸೌಲಭ್ಯಗಳನ್ನು ಬಳಸಿಕೊಂಡು ಸ್ಥಳೀಯ ಭಾಷೆಗೆ ಮಾಡಿದ ಅಪಮಾನ. ಇಂತಹ ಧೋರಣೆಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಪ್ರಾಧಿಕಾರ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ನ.3ರಂದು ಪ್ರಾಧಿಕಾರ ಬ್ಯಾಂಕ್‌ಗೆ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.