ಬೆಂಗಳೂರು: ಭುವಿಯಲ್ಲಿ ಸೂರ್ಯಾಸ್ತ ಮತ್ತು ಚಂದ್ರನಲ್ಲಿ ಸೂರ್ಯೋದಯದ ಪರ್ವ ಕಾಲದಲ್ಲಿ ಚಂದಿರನ ಅಂಗಳದ ಮೇಲೆ ಕಾಲಿಟ್ಟ ಭಾರತ ಬುಧವಾರ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿ ಭವ್ಯ ದಾಖಲೆಯನ್ನೇ ಬರೆಯಿತು.
ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಡುವ ಆತ್ಯಂತಿಕ ಕ್ಷಣಗಳಲ್ಲಿ ಇಡೀ ಭಾರತವೇ ಉಸಿರು ಬಿಗಿ ಕುಳಿತಿತ್ತು. ‘ವಿಕ್ರಮ’ ತನ್ನ ನಾಲ್ಕು ಪಾದಗಳನ್ನು ಚಂದಿರನ ಅಂಗಳದ ಮೇಲೆ ಊರುತ್ತಿದ್ದಂತೆ ಇಡೀ ದೇಶದಲ್ಲಿ ಸಂಭ್ರಮದ ಕಟ್ಟೆಯೊಡೆದು ಹರ್ಷದ ಪ್ರವಾಹ ದಶ ದಿಕ್ಕುಗಳಿಗೂ ಹರಿಯಿತು. ಭಾರತದ ವಿಜ್ಞಾನಿಗಳ ಉಜ್ವಲ ಯಶಸ್ಸನ್ನು ಕಣ್ತುಂಬಿಕೊಂಡ ದೇಶದ ಕೋಟ್ಯಂತರ ಜನ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಹಬ್ಬದಂತೆ ಸಡಗರಪಟ್ಟರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಪ್ರಥಮ ರಾಷ್ಟ್ರ ಭಾರತವೆಂಬ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕ್ಷಣಗಳಿಗೆ ವಿಶ್ವವೇ ಸಾಕ್ಷಿ ಆಯಿತು. ಈ ಸಂತಸದಲ್ಲಿ ವಿಶ್ವದ ಇತರ ರಾಷ್ಟ್ರಗಳೂ ಕೂಡಿಕೊಂಡವು. ಇದರಿಂದ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ‘ಪ್ರತಿಷ್ಠಿತ ದೇಶಗಳ’ ಸಾಲಿಗೆ ಸೇರ್ಪಡೆ ಆಯಿತು.
ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶಿಸಿದ್ದು ಪರದೆಯ ಮೇಲೆ ಕಂಡು ಬರುತ್ತಿದ್ದಂತೆ ಬೆಂಗಳೂರಿನಲ್ಲಿರುವ ಇಸ್ರೊ ಕಮಾಂಡಿಂಗ್ ಸೆಂಟರ್‌ನಲ್ಲಿದ್ದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಯ ಹರ್ಷೋದ್ಗಾರಕ್ಕೆ ಎಣೆಯೇ ಇರಲಿಲ್ಲ. ದಶಕದ ಕನಸು ಈಡೇರಿದ ಸಂತೃಪ್ತಿಯ ಭಾವ ಇಡೀ ತಂಡದ ಮೊಗಗಳಲ್ಲಿ ಮಂದಹಾಸವಾಗಿ ಮಿನುಗುತ್ತಿತ್ತು. ಆಗ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು,‘ನಾವು ಸಾಧಿಸಿದೆವು, ಭಾರತ ಚಂದ್ರನ ಮೇಲೆ ಇಳಿದಿದೆ’ ಎಂದು ಹರ್ಷ ಭರಿತರಾಗಿ ನುಡಿದರು. ಆಗ ಚಪ್ಪಾಳೆಗಳು ಸುರಿ ಮಳೆ ಮತ್ತು ನಗುವಿನ ನಿನಾದ ಮುಗಿಲುಮುಟ್ಟಿತ್ತು.
ಲ್ಯಾಂಡಿಂಗ್‌ನ 18 ನಿಮಿಷಗಳ ಪ್ರಕ್ರಿಯೆ ಆರಂಭವಾಗಿ, ಇನ್ನು 10 ಕಿ.ಮೀಗಳಷ್ಟು ಬಾಕಿ ಉಳಿದಿರುವಾಗ ದಕ್ಷಿಣ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ಪ್ರಕ್ರಿಯೆಯನ್ನು ವೀಕ್ಷಿಸಿದರು. ‘ವಿಕ್ರಮ’ ಹೆಜ್ಜೆ ಇಡುತ್ತಿದ್ದಂತೆ ಮೋದಿ ಮುಷ್ಟಿಗಳನ್ನು ಬಿಗಿಯಾಗಿ ಹಿಡಿದೆತ್ತಿ ಸಂಭ್ರಮಿಸಿದರು.
ಇದೇ ವೇಳೆಗೆ ಲ್ಯಾಂಡರ್ ಕೂಡ, ‘ಭಾರತ, ನಾನು ನನ್ನ ಗುರಿಯನ್ನು ಮುಟ್ಟಿದ್ದೇನೆ ಮತ್ತು ನೀನೂ ಕೂಡಾ’ ಎಂಬ ಸಂದೇಶವನ್ನೂ ಧರೆಗೆ ಕಳುಹಿಸಿತ್ತು.
2019 ರಲ್ಲಿ ಚಂದ್ರಯಾನ –2 ಭಾಗಶಃ ಯಶಸ್ವಿಯಾಗಿತ್ತು. ಕೊನೆಯ ಚರಣದಲ್ಲಿ ಲ್ಯಾಂಡರ್ ನೆಲಕ್ಕೆ ಅಪ್ಪಳಿಸಿತ್ತು. ಇದರಿಂದ ಇಡೀ ದೇಶವೇ ದುಃಖತಪ್ತವಾಗಿತ್ತು. ಸಾಕಷ್ಟು ಟೀಕೆಗಳೂ ಬಂದಿದ್ದವು. ಆದರೆ, ಅದರಿಂದ ಧೃತಿಗಡೆದ ಇಸ್ರೊ ವಿಜ್ಞಾನಿಗಳು ಮತ್ತು ತಂತ್ರಜ್ಞರು ಎಡೆಬಿಡದೇ ನಾಲ್ಕು ವರ್ಷಗಳಿಂದ ಬೆವರು ಹರಿಸಿ, ಚಂದ್ರಯಾನ– 3ಕ್ಕೆ ಸಿದ್ಧತೆ ಮಾಡಿಕೊಂಡರು. ಅಂದು ಸಂಭವಿಸಿದ ಸೋಲನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ವೈಫಲ್ಯದ ಅಂಶಗಳನ್ನು ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿ ಯಶಸ್ಸಿನ ಶಿಖರವನ್ನೇರಿದರು.
ಈ ಬಾರಿ ಸುರಕ್ಷಿತ ಲ್ಯಾಂಡಿಂಗ್‌ಗೆ ಅಗತ್ಯ ಕ್ರಮಗಳನ್ನು ಎಚ್ಚರಿಕೆಯಿಂದಲೇ ರೂಪಿಸಲಾಗಿತ್ತು. ಆಧುನಿಕ ತಂತ್ರಜ್ಞಾನವುಳ್ಳ ರೊಬಾಟ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿದ್ದರಿಂದ, ಲೆಕ್ಕ ತಪ್ಪುವ ಸಾಧ್ಯತೆ ತೀರಾ ಕಡಿಮೆ ಇತ್ತು. ಇಡೀ ವ್ಯವಸ್ಥೆಯೇ ತನ್ನ ತಪ್ಪುಗಳನ್ನು ಪದೇ ಪದೇ ಪರೀಕ್ಷಿಸಿಕೊಂಡು ಸರಿಪಡಿಸಿಕೊಳ್ಳುವ ಮೂಲಕ ಮುಂದಿನ ನಡೆಯನ್ನು ತೀರ್ಮಾನಿಸುವಂತೆ ರೂಪಿಸಲಾಗಿತ್ತು.
ಲ್ಯಾಂಡಿಂಗ್ ಪ್ರಕ್ರಿಯೆಯನ್ನೂ ಕಳೆದ ಬಾರಿಗಿಂತ ಭಿನ್ನವಾಗಿತ್ತು. ಚಂದ್ರಯಾನ–2ಕ್ಕೆ ಅಳವಡಿಸಿದ್ದ ಸೌರಫಲಕಗಳಿಗಿಂತ ದೊಡ್ಡದಾದ ಮತ್ತು ಹೆಚ್ಚು ಸಂಖ್ಯೆಯಲ್ಲಿ ಅಳವಡಿಸಲಾಗಿತ್ತು. ಇವುಗಳ ಸಾಮರ್ಥ್ಯವೂ ಅಧಿಕ. ಇದರಿಂದ ಲ್ಯಾಂಡರ್ ಇಳಿಯುವುದಕ್ಕೆ ಹೆಚ್ಚು ವಿದ್ಯುತ್ ಪೂರೈಕೆ ಆಗಿತ್ತು. ಲ್ಯಾಂಡರ್‌ನ ಕಾಲುಗಳೂ ಎಂಥದ್ದೇ ಸಂದರ್ಭದಲ್ಲಿ ದೃಢವಾಗಿ ಊರುವಂತೆ ಬಲಶಾಲಿಯಾಗಿ ರೂಪಿಸಲಾಗಿತ್ತು. ಈ ನಾಲ್ಕೂ ಕಾಲುಗಳಿಗೆ ಎಂಜಿನ್ ಅಳವಡಿಸಲಾಗಿತ್ತು. ಲ್ಯಾಂಡರ್ ಇಳಿಕೆಗೆ ಎರಡು ಪ್ರತ್ಯೇಕ ಎಂಜಿನ್ ಅಳವಡಿಸಲಾಗಿತ್ತು. ಹಿಂದಿನ ಬಾರಿ ಒಂದೇ ಎಂಜಿನ್ ಇತ್ತು. ಅಲ್ಲದೇ, ಈ ಬಾರಿ ರೋವರ್‌ಗೂ ಅಧಿಕ ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಲಾಗಿತ್ತು.
ಚಂದ್ರನ ಅಸಹಜ ಗುರುತ್ವ ಬಲವನ್ನು ಲೆಕ್ಕ ಹಾಕಿ ವೇಗವನ್ನು ಸಮನ್ವಯಗೊಳಿಸಿಕೊಂಡು ಸಮತೋಲನ ತಪ್ಪದಂತೆ ಇಳಿಸಲು ಅನುಕೂಲವಾಗಲು ನಾಲ್ಕು (ರಾಕೆಟ್) ಎಂಜಿನ್‌ಗಳನ್ನು ಲ್ಯಾಂಡರ್‌ನ ಕಾಲುಗಳಿಗೆ ಅಳವಡಿಸಲಾಗಿತ್ತು. ಅಲ್ಲದೇ, ಈ ಬಾರಿ ಲ್ಯಾಂಡಿಂಗ್ ಪ್ರದೇಶದ ವಿಸ್ತೀರ್ಣವೂ (4x 2.4 ಕಿ.ಮೀ) ವಿಶಾಲಗೊಳಿಸಲಾಗಿತ್ತು. ಇಳಿಯುವ ಪ್ರದೇಶದಲ್ಲಿ ಬಂಡೆ, ಕುಳಿಗಳು ಇದ್ದರೂ, ಆದಷ್ಟು ಸಮತಟ್ಟು ಪ್ರದೇಶದಲ್ಲೇ ಇಳಿಯುವಂತೆ ರೂಪಿಸಲಾಗಿತ್ತು.
ಅಂದ ಹಾಗೆ ಚಂದ್ರನಲ್ಲಿ ಚಂದ್ರನಲ್ಲಿ ಭೂಮಿಯ ರೀತಿ ವಾತಾವರಣವೇ ಇಲ್ಲ ಎನ್ನಬಹುದು. ಇಲ್ಲಿ ಹಗಲು ಮತ್ತು ರಾತ್ರಿ ನಡುವಿನ ಉಷ್ಣತೆಯಲ್ಲಿ ಭಾರೀ ವ್ಯತ್ಯಾಸವಿದೆ. ಹಗಲಿನಲ್ಲಿ ಸೂರ್ಯ ಕಿರಣಗಳು ನೇರವಾಗಿ ಚಂದ್ರನ ಮೇಲ್ಮೈ ಮೇಲೆ ಬೀಳುವುದರಿಂದ ಉಷ್ಣತೆ 107 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ. ಸುಡು ಬಿಸಿಲು ಇರುತ್ತದೆ. ರಾತ್ರಿ ವೇಳೆ ಉಷ್ಣತೆ ಸುಮಾರು ಮೈನಸ್ 153 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಇದಕ್ಕೆ ಪೂರಕವಾಗಿ ವೈಜ್ಞಾನಿಕ ಸಾಧನವನ್ನು ಅಭಿವೃದ್ಧಿಪಡಿಸಿ, ಅಂಗಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿರುವುದು, ಭಾರತದ ಬಾಹ್ಯಾಕಾಶ ವಿಜ್ಞಾನ–ತಂತ್ರಜ್ಞಾನದ ಕ್ಷೇತ್ರದ ವಿಕ್ರಮ ಎಂದೇ ಇಡೀ ಜಗತ್ತು ಬಣ್ಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.