ADVERTISEMENT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಿಂದ ಹೊರ ನಡೆದ ಕಾಂಗ್ರೆಸ್ ಸಂಸದರು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 8:47 IST
Last Updated 4 ಮಾರ್ಚ್ 2020, 8:47 IST
ಕಾಂಗ್ರೆಸ್ ಸಂಸದರಾದ ರಾಜೀವಗೌಡ, ಎಲ್.ಹನುಮಂತಯ್ಯ, ಚಂದ್ರಶೇಖರ್‌, ಡಿ.ಕೆ. ಸುರೇಶ್‌, ನಾಸಿರ್ ಹುಸೇನ್ ಹಾಗೂ ಬಿ.ಕೆ.ಹರಿಪ್ರಸಾದ್
ಕಾಂಗ್ರೆಸ್ ಸಂಸದರಾದ ರಾಜೀವಗೌಡ, ಎಲ್.ಹನುಮಂತಯ್ಯ, ಚಂದ್ರಶೇಖರ್‌, ಡಿ.ಕೆ. ಸುರೇಶ್‌, ನಾಸಿರ್ ಹುಸೇನ್ ಹಾಗೂ ಬಿ.ಕೆ.ಹರಿಪ್ರಸಾದ್    

ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪುಸ್ತಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್ಎಸ್)ನ ಪತ್ರವನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಪ್ರಾಧಿಕಾರದ ಸಭೆಯಿಂದ ಹೊರ ನಡೆದ ಘಟನೆ ಇಲ್ಲಿ ಬುಧವಾರ ನಡೆಯಿತು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಂಸದರಾದ ರಾಜೀವಗೌಡ, ಎಲ್.ಹನುಮಂತಯ್ಯ, ಚಂದ್ರಶೇಖರ್‌, ಡಿ.ಕೆ. ಸುರೇಶ್‌, ನಾಸಿರ್ ಹುಸೇನ್ ಹಾಗೂ ಬಿ.ಕೆ.ಹರಿಪ್ರಸಾದ್ ಸಭಾತ್ಯಾಗ ಮಾಡಿದರು.

ಕನ್ನಡದ ಪರ‌ ಹೋರಾಟ ನಡೆಸಲು ರಾಜ್ಯದಲ್ಲಿ ಅನೇಕ ಸಂಘಟನೆಗಳಿವೆ. ಅವರ ಮನವಿಯನ್ನು ಪುಸ್ತಿಕೆಯಲ್ಲಿ ಅಡಕಗೊಳಿಸದೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಪರ ಇರುವ ಆರ್‌ಎಸ್ಎಸ್‌ನ ಪತ್ರವನ್ನು ಮುದ್ರಿತ ಪುಸ್ತಿಕೆಯಲ್ಲಿ ಅಳವಡಿಸಿದ್ದು ಅಕ್ಷಮ್ಯ ಎಂದು ರಾಜೀವಗೌಡ ಅವರು ತಿಳಿಸಿದರು.

ADVERTISEMENT

ಸರ್ಕಾರದ ಅಧೀನ ಸಂಸ್ಥೆಯಾದ ಪ್ರಾಧಿಕಾರವು ಕನ್ನಡದ ಅಭ್ಯುದಯ ಕೋರಿ ಕೇಂದ್ರಕ್ಕೆ ಏನೆಲ್ಲ ಮನವಿ ಕೊಡಬಹುದು.‌ಆದರೆ ಖಾಸಗಿ ಸಂಸ್ಥೆಯೊಂದರ ಮನವಿ ಪತ್ರವನ್ನು ಅಡಕಗೊಳಿಸಿದ್ದು ಸೂಕ್ತವಲ್ಲ ಎಂದು ಎಲ್.ಹನುಮಂತಯ್ಯ ದೂರಿದರು‌.

ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ನೇತೃತ್ವದ ಪ್ರಾಧಿಕಾರದ ನಿಯೋಗವು ಕನ್ನಡದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದು, ಸಚಿವರ‌ ನಿವಾಸದಲ್ಲಿ ರಾಜ್ಯದ ಸರ್ವ ಪಕ್ಷಗಳ ಸಂಸದರ ಸಭೆ ಆಯೋಜಿಸಿತ್ತು.

ಆರ್‌ಎಸ್‌ಎಸ್ 2018ರಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಡಿದ ನಿರ್ಣಯ ಇರುವ ವಿವರವನ್ನು ಪ್ರಾಧಿಕಾರ ಪುಸ್ತಿಕೆಯಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.