ADVERTISEMENT

ಕನ್ನಡದಲ್ಲಿ ಬ್ಯಾಂಕ್‌ ಪರೀಕ್ಷೆ ಇಲ್ಲ: ಕೇಂದ್ರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 11:01 IST
Last Updated 13 ಸೆಪ್ಟೆಂಬರ್ 2019, 11:01 IST
   

ಬೆಂಗಳೂರು: ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ಕನ್ನಡಿಗರ ಬೇಡಿಕೆಗೆ ಕೇಂದ್ರ ಸರ್ಕಾರ ಕಿಮ್ಮತ್ತು ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಆರೋಪಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ 953 ಕ್ಲರ್ಕ್‌ ಹುದ್ದೆಗಳ ಪರೀಕ್ಷೆಗೆಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಅರ್ಜಿ ಆಹ್ವಾನಿಸಿದ್ದು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ. ಈ ಕುರಿತಂತೆ ‘ಪ್ರಜಾವಾಣಿ‘ ಶುಕ್ರವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

ಪ್ರಜಾವಾಣಿಯ ‘ಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ‘ ಎಂಬ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ.ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.

ಈ ಹಿಂದೆಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರುಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಐಬಿಪಿಎಸ್‌ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.

ನಿರ್ಮಲ ಸೀತಾರಾಮನ್‌ ಅವರು ನಿಡಿದ್ದ ಭರವಸೆ ಹುಸಿಯಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.