ಬೆಂಗಳೂರು: ‘ಸಿಬಿಎಸ್‌ಇ (ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿ) ಸಿಐಎಸ್‌ಸಿಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್) ಮಾನ್ಯತೆ ಪಡೆದ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕು ಎಂಬ ಕಡ್ಡಾಯ ನಿಯಮವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕ ಸಿ.ಸೋಮಶೇಖರ್ ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 20 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ‘ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿಲ್ಲ’ ಎಂದು ನ್ಯಾಯಪೀಠದ ಗಮನ ಸೆಳೆದರು. ಇದಕ್ಕೆ ನ್ಯಾಯಪೀಠ, ‘ಸರ್ಕಾರ ಬೇಗ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮಧ್ಯಂತರ ಪರಿಹಾರ ಕೋರಿಕೆ ಅರ್ಜಿ ಪರಿಗಣಿಸಲಾಗುವುದು’ ಎಂದು ಮೌಖಿಕವಾಗಿ ತಿಳಿಸಿತು. ‘ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಮಧ್ಯಂತರ ಕೋರಿಕೆ: ‘ಕರ್ನಾಟಕ ಭಾಷಾ ಕಲಿಕಾ ಕಾಯ್ದೆ, ನಿಯಮಗಳು ಮತ್ತು ನಿರಾಕ್ಷೇಪಣ ಪತ್ರ (ಎನ್‌ಒಸಿ) ನಿಯಮ 6(1) ಅಸಾಂವಿಧಾನಿಕವಾಗಿದೆ. ಈ ನಿಯಮವು ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ, ಇವುಗಳ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು’ ಎಂಬುದು ಅರ್ಜಿದಾರರ ಮಧ್ಯಂತರ ಕೋರಿಕೆ.
ಅರ್ಜಿಯಲ್ಲಿ ಏನಿದೆ?: ‘ಕರ್ನಾಟಕ ಭಾಷಾ ಕಲಿಕಾ ಕಾಯ್ದೆ, ನಿಯಮಗಳು ಮತ್ತು ನಿರಾಕ್ಷೇಪಣ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಬೇಕು ಎಂದು ಸರ್ಕಾರ ಹೇಳಿದೆ. ನಿರಾಕ್ಷೇಪಣ ಪತ್ರ ನಿಯಮಗಳ ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
‘ಕರ್ನಾಟಕ ಭಾಷಾ ಕಲಿಕಾ ಕಾಯ್ದೆ–2015ರ ಕಲಂ 3, ಕರ್ನಾಟಕ ಭಾಷಾ ಕಲಿಕಾ ನಿಯಮಗಳು–2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಾಕ್ಷೇಪಣ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮ 6(2)ರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನಿಯಮಗಳನ್ನು ಪಾಲಿಸದೇ ಇದ್ದರೆ 6(5)ರ ಅನ್ವಯ ಶೈಕ್ಷಣಿಕ ಸಂಸ್ಥೆಗೆ ನೀಡಲಾಗಿರುವ ನಿರಾಕ್ಷೇಪಣ ಪತ್ರವನ್ನು ಹಿಂಪಡೆಯಲಾಗುತ್ತದೆ’ ಎಂದು ದೂರಲಾಗಿದೆ.
‘ಕರ್ನಾಟಕದಲ್ಲಿನ ವಿದ್ಯಾರ್ಥಿಗಳು ತಮ್ಮ ಇಚ್ಛೆಯಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವುದಕ್ಕೆ ಮತ್ತು ವಿದ್ಯಾರ್ಥಿಗಳ ಹಕ್ಕಿಗೆ ಈ ಕಾಯ್ದೆ ಅಡ್ಡಿ ಉಂಟು ಮಾಡುತ್ತದೆ. ಇದು ಮಕ್ಕಳ ಶೈಕ್ಷಣಿಕ ಹಾಗೂ ಭವಿಷ್ಯದಲ್ಲಿ ಅವರ ಔದ್ಯೋಗಿಕ ಅವಕಾಶಗಳಿಗೆ ತೊಂದರೆ ಉಂಟು ಮಾಡುತ್ತದೆ. ಅಂತೆಯೇ, ಕನ್ನಡವನ್ನು ಹೊರತುಪಡಿಸಿ ಅನ್ಯ ವಿಷಯಗಳನ್ನು ಬೋಧಿಸುವ ಶಿಕ್ಷಕರ ಜೀವನಕ್ಕೂ ಇದು ಎರವಾಗಲಿದೆ’ ಎಂದು ಆಕ್ಷೇಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.