ADVERTISEMENT

ತಂತ್ರಜ್ಞಾನ ಅಭಿವೃದ್ಧಿಗೆ ಸಮನ್ವಯದ ಕೊರತೆ: ಬೇಳೂರು ಸುದರ್ಶನ ಅಭಿಪ್ರಾಯ

ಸಮಾನಾಂತರ ವೇದಿಕೆಯಲ್ಲಿ ‘ಕನ್ನಡ ಭಾಷೆ: ಹೊಸ ತಂತ್ರಜ್ಞಾನ’ ಕುರಿತು ಗೋಷ್ಠಿ

ಸುಕೃತ ಎಸ್.
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ:‘ಭಾಷಾ ತಜ್ಞರು ಮತ್ತು ತಂತ್ರಜ್ಞರ ನಡುವೆ ದೊಡ್ಡ ಕಂದಕ ಏರ್ಪಟ್ಟಿದೆ. ಈ ಕಂದಕವನ್ನು ಮೊದಲು ಇಲ್ಲವಾಗಿಸಬೇಕಾಗಿದೆ’ ಎಂದು ಮುಖ್ಯಮಂತ್ರಿ ಅವರ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಅಭಿಪ್ರಾಯಪಟ್ಟರು.

‘ಕನ್ನಡ ಭಾಷೆ: ಹೊಸ ತಂತ್ರಜ್ಞಾನ’ ಗೋಷ್ಠಿಯಲ್ಲಿ ‘ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆ’ ವಿಷಯದ ಕುರಿತು ಅವರು ಮಾತನಾಡಿದರು.

‘ಕಾರ್ಯಸಮನ್ವಯದ ಕೊರತೆ ಇದೆ. ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿವಿಧ ಸಂಸ್ಥೆಗಳು ಭಾಗಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಶೋಧನಾ ಸಂಸ್ಥೆ ಮತ್ತು ಖಾಸಗಿ ಸಂಸ್ಥೆ ಹೀಗೆ ತಂತ್ರಾಂಶದ ಸಂಶೋಧನೆ ಬೇರೆ ಬೇರೆ ಕೇಂದ್ರಗಳಲ್ಲಿ ಹಂಚಿಹೋಗಿದೆ. ಇವರುಗಳ ಸಮನ್ವಯ ಮೂಡಿದಾಗ ನಮ್ಮ ಗುರಿಯನ್ನು ತಲುಪಲು ಸಹಾಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಶಿಷ್ಟ ಮತ್ತು ವೈಜ್ಞಾನಿಕವಾಗಿ ರೂಪಿಸಿರುವ ಕನ್ನಡ ಕಲಿಕಾ ತಂತ್ರಾಂಶದ ಸಂಶೋಧನೆಯ ಅಗತ್ಯ ಇದೆ’ ಎಂದು ಭಾಷಾ ಕಲಿಕೆಯಲ್ಲಿ ತಂತ್ರಜ್ಞಾನ ವಿಷಯದ ಕುರಿತು ಮಾತನಾಡಿದ ಜಿ.ಎನ್‌. ನರಸಿಂಹಮೂರ್ತಿಹೇಳಿದರು.

‘ಬೆಂಗಳೂರು ವಿಶ್ವವಿದ್ಯಾಲಯ ವಿದೇಶಿಯವರಿಗೆ, ಕನ್ನಡ ಗೊತ್ತಿಲ್ಲದವರಿಗೆ ಭಾಷೆ ಕಲಿಸುವ ಪ್ರಯತ್ನವನ್ನು ಹಲವಾರು ವರ್ಷಗಳಿಂದಲೂ ಮಾಡುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಈ ಕೆಲಸ ಮಾಡುತ್ತಿದೆ. ಆದರೂ, ಅದು ಇನ್ನೂ ಶಿಸ್ತಿಗೆ ಒಳಪಡಬೇಕಿದೆ’ ಎಂದರು.

‘ಸಾಹಿತ್ಯ ಮತ್ತು ತಂತ್ರಜ್ಞಾನ ಎರಡನ್ನೂ ಎರಡು ವಿಪರೀತದಂತೆ ನೋಡುವ ಪರಿಪಾಠ ಬೆಳೆದುಕೊಂಡು ಬಂದಿದೆ. ಆದರೆ, ಇದು ಹಾಗಾಗಬೇಕಿಲ್ಲ’ ಎಂದು ‘ಸಾಹಿತ್ಯದಲ್ಲಿ ತಂತ್ರಜ್ಞಾನದ ಬಳಕೆ’ ಕುರಿತು ವಿಷಯ ಮಂಡಿಸಿದ ಟಿ.ಜಿ. ಶ್ರೀನಿಧಿ ಹೇಳಿದರು.

‘ಯುವ ಬರಹಗಾರರಿಗೆ ತಂತ್ರಜ್ಞಾನ ವರದಾನವಾಗಿದೆ. ಅವರ ಇ ಪುಸ್ತಕಗಳಿಗೆ ಲಕ್ಷ ಲಕ್ಷ ಓದುಗರು ದೊರಕುತ್ತಿದ್ದಾರೆ. 450 ಪುಟದ ಪುಸ್ತಕ ಮತ್ತು 8 ನಿಮಿಷದ ವಿಡಿಯೊ ಎರಡೂ ಅಷ್ಟೇ ಪರಿಣಾಮಕಾರಿಯಾಗಿವೆ. ಪುಸ್ತಕಗಳ ಮಾಹಿತಿ, ಅದರ ವಿಷಯವಸ್ತುಗಳ ಕುರಿತು ವಿಡಿಯೊ ಮಾಡುವ ಪರಿಪಾಠವೂ ಹೆಚ್ಚು ಉಪಯೋಗಕಾರಿ’ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿ ನಡೆಯುವ ಸ್ಥಳದ ಮಾಹಿತಿಯೇ ಇಲ್ಲ!

ಮುಖ್ಯ ವೇದಿಕೆಯಿಂದ ಅಂಬೇಡ್ಕರ್‌ ಸಭಾಭವನ ತುಂಬಾ ದೂರ ಇದೆ. ಎಲ್ಲಿಯೂ ದಾರಿ ಸೂಚಕ ಫಲಕಗಳನ್ನು ಹಾಕಿಲ್ಲ. ಬಿಸಿಲಲ್ಲಿ ನಡೆದುಕೊಂಡು ಹೋಗುವುದು ಎಂದರೆ ಸಾಹಸವೇ ಸರಿ. ಮುಖ್ಯ ವೇದಿಕೆಯಿಂದ ಯಾಕಿಷ್ಟು ದೂರದಲ್ಲಿ ಮತ್ತೊಂದು ವೇದಿಕೆ ಮಾಡಬೇಕು ಎಂದು ಸಾಹಿತ್ಯಾಸಕ್ತರು ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು.

***

ತಂತ್ರಾಂಶ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಯೋಜನೆಯೊಂದಿಗೆ ಅವರನ್ನು ಭೇಟಿ ಮಾಡಲಾಗುವುದು

ಡಾ. ಮನು ಬಳಿಗಾರ್‌, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.