ADVERTISEMENT

ಗಡಿನಾಡಲ್ಲಿ ಕನ್ನಡ ಶಾಲೆಗೆ ಕುತ್ತು!

ಕನ್ನಡ ಬದಲಿಗೆ ತೆಲುಗು ಮಾಧ್ಯಮ ಜಾರಿಗೆ ಯತ್ನ

ಕೆ.ನರಸಿಂಹ ಮೂರ್ತಿ
Published 31 ಅಕ್ಟೋಬರ್ 2019, 19:16 IST
Last Updated 31 ಅಕ್ಟೋಬರ್ 2019, 19:16 IST
ಮಡೇನಹಳ್ಳಿಯಲ್ಲಿರುವ ಕನ್ನಡ ಶಾಲೆಯ ಹೊರಗೆ ಅಳವಡಿಸಿರುವ ತೆಲುಗು ಫಲಕ.
ಮಡೇನಹಳ್ಳಿಯಲ್ಲಿರುವ ಕನ್ನಡ ಶಾಲೆಯ ಹೊರಗೆ ಅಳವಡಿಸಿರುವ ತೆಲುಗು ಫಲಕ.   

ಬಳ್ಳಾರಿ: ಕರ್ನಾಟಕದಲ್ಲಿ ರಾಜ್ಯೋತ್ಸವ ಸಂಭ್ರಮ ಗರಿಗೆದರಿರುವ ಹೊತ್ತಿನಲ್ಲೇ, ಬಳ್ಳಾರಿ ಗಡಿಭಾಗದಲ್ಲಿರುವ ಆಂಧ್ರ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಯತ್ನ ಆರಂಭವಾಗಿದೆ. ಕನ್ನಡ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಶಾಲೆಯನ್ನು ಏಕೆ ಮುಚ್ಚಲಾಗುತ್ತಿದೆ ಎಂಬ ಮಾಹಿತಿಯನ್ನೂ ಪೋಷಕರಿಗೆ ನೀಡಿಲ್ಲ.

ಅನಂತಪುರ ಜಿಲ್ಲೆಯ ರಾಯದುರ್ಗಂ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಡಿ.ಹಿರೇಹಾಳ್ ಮಂಡಳ ವ್ಯಾಪ್ತಿಯ ಮಡೇನಹಳ್ಳಿಯಲ್ಲಿರುವ ಜಿಲ್ಲಾ ಪರಿಷತ್‌ ಉನ್ನತ ಪಾಠಶಾಲೆಯ ಪ್ರಾಥಮಿಕ ವಿಭಾಗವನ್ನು ಇದೇ ವರ್ಷ ಮುಚ್ಚಲಾಗುವುದು. ನಂತರ 1ರಿಂದ 5ನೇ ತರಗತಿವರೆಗೆ ತೆಲುಗು ಮಾಧ್ಯಮವಷ್ಟೇ ಇರುತ್ತದೆ ಎಂದು ಅಲ್ಲಿನ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಪೋಷಕರು ಚಿಂತೆಗೆ ಬಿದ್ದಿದ್ದಾರೆ. 1961ರಿಂದಲೂ ಕನ್ನಡ ಮಾಧ್ಯಮದ ಶಾಲೆಯುಳ್ಳ ಗ್ರಾಮ ಬಳ್ಳಾರಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ.

ADVERTISEMENT

ಪ್ರತಿರೋಧ:ಕನ್ನಡ ಮತ್ತು ತೆಲುಗು ಮಾಧ್ಯಮವೆರಡರಲ್ಲೂ ಈ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ 197 ಮಕ್ಕಳಿದ್ದಾರೆ. ಇಬ್ಬರು ಪೂರ್ಣಾವಧಿ ಶಿಕ್ಷಕರಿದ್ದಾರೆ, ಇಬ್ಬರು ಸ್ವಯಂಸೇವಕ ಶಿಕ್ಷಕರಿದ್ದಾರೆ.

ವಿರೋಧ:ಕನ್ನಡ ಮಾಧ್ಯಮ ಶಾಲೆಮುಚ್ಚುವ ಪ್ರಯತ್ನಕ್ಕೆ ವಿರೋಧವೂ ವ್ಯಕ್ತವಾಗಿದೆ. ಈ ಶಾಲೆಗೆ ಭೇಟಿ ನೀಡಿದ ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅನಂತರಪುರಂ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಜಾಪತಿ ಮಠ, ‘ಕನ್ನಡ ಶಾಲೆಗಳನ್ನು ಇಲ್ಲಿನ ಅಧಿಕಾರಿಗಳು ದುರುದ್ದೇಶದಿಂದಲೇ ಮುಚ್ಚುವ ಯತ್ನ ನಡೆಸಿದ್ದಾರೆ’ ಎಂದು ದೂರಿದರು.

‘ಉದ್ಯೋಗ, ಶಿಕ್ಷಣದಲ್ಲಿ ಬೇಕು’

‘ದೇಶದಲ್ಲಿ ಎಲ್ಲಿಯೇ ಆದರೂ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಅದು ಕಾಗದದಲ್ಲಿ ಮಾತ್ರ ಇದೆ. ‘ನೀವು ಆಂಧ್ರದವರು’ ಎಂದು ಕರ್ನಾಟಕದಲ್ಲಿ ತಿರಸ್ಕರಿಸುತ್ತಾರೆ. ‘ನೀವು ಕನ್ನಡ ಮಾಧ್ಯಮದಲ್ಲಿ ಓದಿದವರು’ ಎಂದು ಆಂಧ್ರದಲ್ಲಿ ತಿರಸ್ಕರಿಸುತ್ತಾರೆ. ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳು ಅತಂತ್ರರಾಗಿದ್ದಾರೆ’ ಎಂದು ಶಿಕ್ಷಕ ತಿಪ್ಪೇಸ್ವಾಮಿ, ಬಾಲರಾಜ್‌ ಹೇಳಿದರು.

ಹಿಂದೆಯೂ ಕನ್ನಡ ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಉಳಿದ ಶಾಲೆಗಳನ್ನೂ ಮುಚ್ಚಿ ಕನ್ನಡವನ್ನು ಇಲ್ಲವಾಗಿಸುವ ಪ್ರಯತ್ನ ಆತಂಕಕಾರಿ
–ಗಿರಿಜಾಪತಿ ಮಠ, ಅನಂತಪುರಂ ಜಿಲ್ಲೆ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.