ADVERTISEMENT

ಆಗ ಕುವೆಂಪು, ಈಗ ಕಂಬಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:24 IST
Last Updated 4 ಜನವರಿ 2019, 20:24 IST
   

ಈಗ ಕಂಬಾರ (ಧಾರವಾಡ, ಜ.4, 2019)

l ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ.

ಆಗ ಕುವೆಂಪು (ಧಾರವಾಡ, ಮೇ 7, 1957)

ADVERTISEMENT

l ವಿದ್ಯಾರ್ಥಿಗಳ ಮೇಲೆ ಪರಕೀಯರು ಹೇರಿರುವ ಇಂಗ್ಲಿಷಿನ ಹೆಣಭಾರದ ಚಪ್ಪಡಿಯನ್ನು ಕಿತ್ತೊಗೆಯಬೇಕು.

***

ಈಗ ಕಂಬಾರ (ಧಾರವಾಡ, ಜ.4, 2019)

l ಇಂಗ್ಲಿಷ್ ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ!

ಆಗ ಕುವೆಂಪು (ಧಾರವಾಡ, ಮೇ 7, 1957)

l ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ
ಅರ್ಥಶೂನ್ಯವಾಗುತ್ತದೆ.

***

ಈಗ ಕಂಬಾರ (ಧಾರವಾಡ, ಜ.4, 2019)

l ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹ್ಯಾಗಿದೆ? ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಸುರುವಾಗಿವೆ.

ಆಗ ಕುವೆಂಪು (ಧಾರವಾಡ, ಮೇ 7, 1957)

l ಶಿಕ್ಷಣ ಮಾಧ್ಯಮವಾಗಲು ಕನ್ನಡ ಸಮರ್ಥವಾಗಿದೆ. ಕನ್ನಡ ನಮ್ಮ ಪ್ರಥಮ ಭಾಷೆಯಾಗದಿದ್ದರೆ ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ. ಕರ್ನಾಟಕದ ರಚನೆ ಅರ್ಥಶೂನ್ಯವಾಗುತ್ತದೆ.

***

ಆಗ ಕುವೆಂಪು (ಧಾರವಾಡ, ಮೇ 7, 1957)

l ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ ವ್ಯಾಮೋಹಪೋತ ಇಂಗ್ಲಿಷ್‌ಗೆ ಬಲಿಗೊಡುವುದೇನು?

ಈಗ ಕಂಬಾರ (ಧಾರವಾಡ, ಜ.4, 2019)

l ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ ಇಂಗ್ಲಿಷ್. ಯಾವುದೇ ಭಾಷೆ ಮನುಷ್ಯನ ತಿಳಿವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು.

***

ಈಗ ಕಂಬಾರ (ಧಾರವಾಡ, ಜ.4, 2019)

l ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವವಾಗದೆ ಹೋಗಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಿಗೆ ದೊರೆಯುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾದವನು.

ಆಗ ಕುವೆಂಪು (ಧಾರವಾಡ, ಮೇ 7, 1957)

l ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ; ಆಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಭಾರತೀಯರನ್ನು ಶತಶತ
ಮಾನಗಳಿಂದ ಅಖಂಡವಾಗಿಟ್ಟಿರುವುದು ಅಧ್ಯಾತ್ಮ ಶಕ್ತಿ.

***

ಆಗ ಕುವೆಂಪು (ಧಾರವಾಡ, ಮೇ 7, 1957)

l ಇಂಗ್ಲಿಷ್ ಎಂಬ ಸಂಕೋಲೆಯ ಭಾರವೇ ಅಭ್ಯಾಸವಾಗಿ ನಡೆ ಕಲಿತ ಕೆಲವರಿಗೆ ಅದರಿಂದ ಬಿಡುಗಡೆ ಹೊಂದುವ ಇಷ್ಟವೂ ಇಲ್ಲ; ಸಂಕೋಲೆ ಹಾಕಿಕೊಳ್ಳದೆ ಕಲಿತ ನಡೆ ಶಿಷ್ಟಾಚಾರ ಸಮ್ಮತವಾಗುವುದಿಲ್ಲ ಎಂಬ ಹಾಸ್ಯಾಸ್ಪದ ಅಭಿಪ್ರಾಯ ಅವರದು.

ಈಗ ಕಂಬಾರ (ಧಾರವಾಡ, ಜ.4, 2019)

l ಈಗ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿವೆ. ‘ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ’ ಎಂದು ಪಂಡಿತರು ಹೇಳುತ್ತಿದ್ದಾರೆ.

***

ಆಗ ಕುವೆಂಪು (ಧಾರವಾಡ, ಮೇ 7, 1957)

l ವಿದ್ಯಾರ್ಥಿಗಳಾದ ನಮ್ಮ ಮಕ್ಕಳಿಗೆ ಬೇಕಾಗಿರುವ ಒಂದು ಬಟ್ಟಲು ಹಾಲನ್ನು ಮಣಭಾರದ ಇಂಗ್ಲಿಷ್ ಕಡಾಯಿಯಲ್ಲಿ ಹಾಕಿಕೊಟ್ಟರೆ ಅವರು ಕುಡಿಯುವುದೆಂತು? ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ
ವ್ಯಾಮೋಹಪೋತನಿಗೆ ಬಲಿಗೊಡುವುದೇನು?

ಈಗ ಕಂಬಾರ (ಧಾರವಾಡ, ಜ.4, 2019)

l ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲಿಷ್ ಪಠ್ಯವಾಗಲಿ, ಆಯಾ ವರ್ಷವೇ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಈ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಮುಂದೆ ಬರಬೇಕು ಮತ್ತು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಸರ್ಕಾರದ ಅಪ್ಪಣೆಗೆ ಕಾಯುತ್ತಾ ಕೂರಬಾರದು..

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.