ADVERTISEMENT

ಅದ್ಧೂರಿತನಕ್ಕೆ ಸೀಮಿತವಾಗುತ್ತಿರುವ ಸಮ್ಮೇಳನಗಳು

ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದ

ಸಚ್ಚಿದಾನಂದ ಕುರಗುಂದ
Published 5 ಜನವರಿ 2019, 20:26 IST
Last Updated 5 ಜನವರಿ 2019, 20:26 IST
ಗೋಷ್ಠಿಯಲ್ಲಿ ಶಾಂತಿನಾಥ ದಿಬ್ಬದ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ‍್ರೊ. ರಾಘವೇಂದ್ರ ಪಾಟೀಲ, ಡಾ. ಬಸವರಾಜ ಸಾದರ ಇದ್ದರು  – ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಶಾಂತಿನಾಥ ದಿಬ್ಬದ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ‍್ರೊ. ರಾಘವೇಂದ್ರ ಪಾಟೀಲ, ಡಾ. ಬಸವರಾಜ ಸಾದರ ಇದ್ದರು – ಪ್ರಜಾವಾಣಿ ಚಿತ್ರ   

ಡಾ. ಶಂ. ಬಾ. ಜೋಶಿ ವೇದಿಕೆ (ಧಾರವಾಡ): ‘ಇಂದಿನ ರಾಜಕೀಯ ಮತ್ತು ಧಾರ್ಮಿಕ ಸ್ಥಿತಿ ಅಲ್ಲೋಲಕಲ್ಲೋಲವಾಗಿದೆ. ಇವೆರಡೂ ಅತ್ಯಂತ ಭ್ರಷ್ಟವಾದ ಹೊತ್ತಿನಲ್ಲೂ ರಾಜಕೀಯ ಮತ್ತು ಧಾರ್ಮಿಕ ಪ್ರಜ್ಞೆ ಮೂಡಿಸುವ ಕೃತಿಗಳು ಬರುತ್ತಿಲ್ಲ’ ಎಂದು ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.

‘ಮರುಚಿಂತನೆ: ಆಧುನಿಕ ಸಾಹಿತ್ಯ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಸಮ್ಮೇಳನಗಳಲ್ಲಿಯೂ ಕನ್ನಡ ಕಟ್ಟುವ ನಿಜವಾದ ಕಾಳಜಿ ಇಲ್ಲದಂತಾಗಿದೆ. ಕೇವಲ ಅದ್ಧೂರಿ ಸಮಾರಂಭಗಳಿಗೆ ಸೀಮಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ಪ್ರಮುಖ ಲೇಖಕರ ಕೃತಿಗಳು ಪರಾಮರ್ಶೆಗೆ ದೊರೆಯುವ ರೀತಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಬೇಕು ಎಂದು ಆಗ್ರಹಿಸಿದ ಅವರು, 'ಗುಲ್ವಾಡಿ ವೆಂಕಟರಾವ್‌ ಅವರ ಕೃತಿಗಳು ಸೇರಿದಂತೆ ಹಲವು ಹಿರಿಯ ಲೇಖಕರ ಕೃತಿಗಳು ಸಿಗುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ಅಗತ್ಯವಿದೆ. ಒಂದೇ ಸೂರಿನ ಅಡಿಯಲ್ಲಿ ನಮಗೆ ಬೇಕಾಗುವ ಎಲ್ಲ ಕೃತಿಗಳು ಲಭ್ಯವಾಗಬೇಕು. ಇದರಿಂದ, ಸಂಶೋಧಕರಿಗೂ ಅನುಕೂಲವಾಗುತ್ತದೆ. ಈ ಕಾರ್ಯಕ್ಕೆ ₹10 ಕೋಟಿ ಮೀಸಲಿಡಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

‘ಈ ಮೊದಲು ಸಮ್ಮೇಳನಕ್ಕೆ ಒಂದರಿಂದ ಎರಡು ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಈಗ ₹12 ಕೋಟಿ ಅಗತ್ಯವಿದೆ ಎಂದು ಹೇಳುತ್ತಾರೆ. ಒಂದು ವರ್ಷ ಸಮ್ಮೇಳನ ನಡೆಸದೆ ಮಹತ್ವದ ಉದ್ದೇಶ ಹೊಂದಿರುವ ಗ್ರಂಥಾಲಯಕ್ಕೆ ಅನುದಾನ ನೀಡಬೇಕು. ಇದೇ ನಿಜವಾದ ಕನ್ನಡ ಕಟ್ಟುವ ಕೆಲಸ. ಈ ಹಿಂದೆ ನಾನು ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಆಗ ಕಾರ್ಯಕಾರಿಣಿಯ 37 ಸದಸ್ಯರಲ್ಲಿ ವಿವೇಕ ರೈ ಅವರನ್ನು ಹೊರತುಪಡಿಸಿ ಯಾರೂ ಬೆಂಬಲ ನೀಡಲಿಲ್ಲ’ ಎಂದು ತಮಗಾದ ಅನುಭವವನ್ನು ಬಿಚ್ಚಿಟ್ಟರು.

ಸಮ್ಮೇಳನ ಉದ್ಘಾಟನೆ ವಿಳಂಬಕ್ಕೆ ಆಕ್ರೋಶ

ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಉದ್ಘಾಟನಾ ಸಮಾರಂಭ ವಿಳಂಬವಾಗಿದ್ದನ್ನು ಪ್ರಸ್ತಾಪಿಸಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಒಬ್ಬರಿಂದ ಪ್ರತಿಯೊಬ್ಬರ ನಾಲ್ಕು ಗಂಟೆ ಸಮಯ ವ್ಯರ್ಥವಾಯಿತು. ರಾಜಕೀಯ ನಾಯಕರಾದವರಿಗೆ ಜವಾಬ್ದಾರಿ ಇರಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರು ಹೇಳದೇ ಕಿಡಿಕಾರಿದರು.

ಮೈಕ್‌ ವ್ಯವಸ್ಥೆಗೆ ವಿಳಂಬ: ಗೋಷ್ಠಿ ನಡೆದ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ಮೈಕ್‌ ವ್ಯವಸ್ಥೆ ಕಲ್ಪಿಸುವುದು ವಿಳಂಬವಾಯಿತು. ಇದರಿಂದ ಬೆಳಿಗ್ಗೆ 9.45ಕ್ಕೆ ಆರಂಭವಾಗಿದ್ದ ಗೋಷ್ಠಿಯು ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು.

ಇದಕ್ಕೆ ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಾ. ನರಹಳ್ಳಿ, ‘ನಿಮಗೆ ಜವಾಬ್ದಾರಿ ಇಲ್ಲವೇ? ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾರೆ. ಒಂದು ಮೈಕ್‌ ವ್ಯವಸ್ಥೆ ಕಲ್ಪಿಸದಿದ್ದರೆ ಹೇಗೆ? ಮುಂಚಿತವಾಗಿಯೇ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು’ ಎಂದರು.

ಇತರ ಗೋಷ್ಠಿಗಳು ವಿಳಂಬವಾಗುತ್ತವೆ ಎನ್ನುವ ಕಾರಣಕ್ಕೆ ಮೈಕ್‌ ಇಲ್ಲದೆಯೇ ಗೋಷ್ಠಿ ಆರಂಭಿಸಲಾಯಿತು. ಕೆಲ ಹೊತ್ತಿನ ಬಳಿಕ ಮೈಕ್‌ ವ್ಯವಸ್ಥೆ ಕಲ್ಪಿಸಲಾಯಿತು.

‘ಅಲಭ್ಯ ಕೃತಿಗಳ ಮರುಮುದ್ರಣವಾಗಲಿ’

‘ಯಾವ ಲೇಖಕರ ಕೃತಿಗಳು ಲಭ್ಯವಾಗುತ್ತಿಲ್ಲವೋ ಅಂಥವುಗಳನ್ನು ಮರುಮುದ್ರಣ ಮಾಡದೆಯೇ ನಿರ್ಲಕ್ಷ್ಯವಹಿಸಲಾಗುತ್ತಿದೆ’ ಎಂದು ಸಾಹಿತಿ ರಾಘವೇಂದ್ರ ಪಾಟೀಲ ಬೇಸರ ವ್ಯಕ್ತಪಡಿಸಿದರು.

‘ಗುಲ್ವಾಡಿ ವೆಂಕಟರಾವ್‌: ಕಾದಂಬರಿಗಳು’ ವಿಷಯದ ಕುರಿತು ಮಾತನಾಡಿದ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ, ‘ಗುಲ್ವಾಡಿ ಅವರ ಭಾಗೀರಥಿ ಮತ್ತು ಸೀಮಂತಿನಿ ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮರುಮುದ್ರಣ ಮಾಡಬೇಕು’ ಎಂದು ಸಲಹೆ ನೀಡಿದರು.

‘ಗುಲ್ವಾಡಿ ಅವರ ಇಂದಿರಾಬಾಯಿ, ಭಾಗೀರಥಿ ಕಾದಂಬರಿಗಳು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಸಂರಚನೆಯ ಚಿತ್ರಗಳನ್ನು ಕಟ್ಟಿಕೊಡುತ್ತವೆ. 18ನೇ ಶತಮಾನ ಕೊನೆಗೊಂಡು, 19ನೇ ಶತಮಾನ ಎದುರಿಸಿದ್ದ ಆಧುನಿಕ ಸಮಾಜವನ್ನು ಗುಲ್ವಾಡಿ ಅನಾವರಣಗೊಳಿಸಿದ್ದಾರೆ’ ಎಂದು ವಿವರಿಸಿದರು.

ಮನೆಹಾಳು ಸೀರಿಯಲ್‌ಗಳು!

‘ಟಿ.ವಿ. ಚಾನಲ್‌ಗಳು ಅಯೋಗ್ಯ ಸಿರಿಯಲ್‌ಗಳನ್ನು ವರ್ಷಾನುಗಟ್ಟಲೇ ಪ್ರಸಾರ ಮಾಡುವ ಬದಲು ಮಿರ್ಜಿ ಅಣ್ಣಾರಾಯ, ಬಸವರಾಜ ಕಟ್ಟಿಮನಿ ಅವರಂತಹ ವ್ಯಕ್ತಿಗಳ ಕುರಿತು ಧಾರಾವಾಹಿ ಮಾಡಿ ಟಿಆರ್‌ಪಿ ಮತ್ತು ಆದಾಯ ಹೆಚ್ಚಿಸಿಕೊಳ್ಳಬೇಕು’ ಎಂದು ಸಾಹಿತಿ ಡಾ. ಬಸವರಾಜ ಸಾದರ ಆಕ್ರೋಶದಿಂದಲೇ ಸಲಹೆ ನೀಡಿದರು.

‘ಬಸವರಾಜ ಕಟ್ಟಿಮನಿ: ಕಾದಂಬರಿಗಳು’ ಬಗ್ಗೆ ವಿಶ್ಲೇಷಣೆ ನಡೆಸಿದ ಅವರು, ‘ಮೆಟ್ರಿಕ್‌ ಪಾಸಾಗಿದ್ದ ಬಸವರಾಜ ಕಟ್ಟಿಮನಿ ಅವರು 1942ರಿಂದ 1968ರ ಅವಧಿಯಲ್ಲಿ ರಚಿಸಿದ 60 ಕೃತಿಗಳಲ್ಲಿ 40 ಕಾದಂಬರಿಗಳಿವೆ. ಬಡತನ, ಶೋಷಣೆ ಅನುಭವಿಸಿದ್ದ ಅವರು ಬಂಡಾಯದ ಧೋರಣೆ ವ್ಯಕ್ತಪ‍ಡಿಸಿದರು’ ಎಂದು ವಿವರಿಸಿದರು.

*ಸಾತ್ವಿಕ ಜನರು ಇಂದು ನಿಷ್ಕ್ರಿಯರಾಗಿದ್ದಾರೆ ಮತ್ತು ದುರ್ಬಲರಾಗಿದ್ದಾರೆ. ಹೀಗಾಗಿ, ಕೆಲವರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ.

- ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.