ADVERTISEMENT

ಧಾರವಾಡ ಸಮ್ಮೇಳನಕ್ಕೆ ₹8 ಕೋಟಿ

₹12 ಕೋಟಿಗೆ ಬೇಡಿಕೆ , ದಾನಿಗಳ ನೆರವಿಗೆ ಮನವಿ

ಇ.ಎಸ್.ಸುಧೀಂದ್ರ ಪ್ರಸಾದ್
Published 7 ಡಿಸೆಂಬರ್ 2018, 20:00 IST
Last Updated 7 ಡಿಸೆಂಬರ್ 2018, 20:00 IST
84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ
84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ   

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಮೀಸಲಿರುವ ₹2 ಕೋಟಿ ಅನುದಾನದ ಜತೆಗೆ ಹೆಚ್ಚುವರಿಯಾಗಿ ₹6 ಕೋಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಜೂರು ಮಾಡಿದೆ. ಇದರಿಂದಾಗಿ ಮೈಸೂರಿನಲ್ಲಿ ನಡೆದ ಸಮ್ಮೇಳನದ ಮೊತ್ತದಷ್ಟೇ ಧಾರವಾಡದ ಸಮ್ಮೇಳನಕ್ಕೂ ದೊರೆತಂತಾಗಿದೆ.

ಮೈಸೂರು ಸಮ್ಮೇಳನದ ಖರ್ಚು ವೆಚ್ಚಗಳನ್ನು ಪರಿಶೀಲಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ₹12 ಕೋಟಿ ಬೇಡಿಕೆಯ ಪ್ರಸ್ತಾವವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಸಲ್ಲಿಸಿತ್ತು. ಅಂತಿಮವಾಗಿ, ₹8 ಕೋಟಿ ಮಂಜೂರು ಮಾಡಲಾಗಿದೆ. ಇದರಿಂದಾಗಿ ಉಳಿದ ಸಂಪನ್ಮೂಲ ಕ್ರೋಡೀಕರಣದತ್ತ ಜಿಲ್ಲಾಡಳಿತ ಗಮನ ಹರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್‌, ‘ಸಾಕಷ್ಟು ಸಂಘ ಸಂಸ್ಥೆಗಳನ್ನು ಈವರೆಗೂ ಭೇಟಿ ಮಾಡಿ ಸಮ್ಮೇಳನಕ್ಕೆ ನೆರವು ಕೋರಲಾಗಿದೆ. ಹಾಗೆಯೇ ಈ ಭಾಗದ ಪ್ರಮುಖ ಮಠಗಳಾದ ಧಾರವಾಡದ ಮುರುಘಾಮಠ, ಹುಬ್ಬಳ್ಳಿಯ ಮೂರುಸಾವಿರ ಮಠ

ADVERTISEMENT
ದೀಪಾ ಚೋಳನ್‌

ಮತ್ತು ಸಿದ್ಧಾರೂಡ ಮಠಗಳ ಮುಖ್ಯಸ್ಥರೊಂದಿಗೆ ಸೋಮವಾರ ಮಾತನಾಡಲಿದ್ದೇನೆ. ಕಿರಾಣಿ ವರ್ತಕರು ಮತ್ತು ವಕೀಲರ ಸಂಘವನ್ನು ಸಂಪರ್ಕಿಸಿ ಅವರ ಸಹಕಾರವನ್ನೂ ಕೋರಲಾಗುವುದು’ ಎಂದರು.

‘ಸರ್ಕಾರಿ ನೌಕರರನ್ನು ಸಂಪರ್ಕಿಸಲಾಗಿದ್ದು, ಸಮ್ಮೇಳನಕ್ಕೆ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲು ಮೌಖಿಕ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಕೆಲ ಸಂಘಗಳು ತಮ್ಮ ಸದಸ್ಯರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ಮೇಲೆ ಭರವಸೆ ಇದೆ’ ಎಂದರು.

‘ಕಾರ್ಪೊರೇಟ್ ಕಂಪೆನಿಗಳಿಗೆ ಈಗಾಗಲೇ ಪತ್ರ ಬರೆದು ಅವರ ಪ್ರಾಯೋಜಕತ್ವ ಕೇಳಲಾಗಿದೆ. ಟಾಟಾ ಹಾಗೂ ಇನ್ನಿತರ ಕಂಪೆನಿಗಳಿಂದ ನೆರವು ನಿರೀಕ್ಷಿಸಲಾಗಿದೆ. ಸಾರ್ವಜನಿಕರು, ಉದ್ಯಮಿಗಳು ಸಮ್ಮೇಳನಕ್ಕೆ ನೆರವು ನೀಡಲು ಅನುಕೂಲವಾಗುವಂತೆ ಸಿಎಸ್‌ಆರ್‌ ಖಾತೆ ತೆರೆಯಲಾಗಿದೆ. ಹೀಗಾಗಿ, ಧಾರವಾಡದಲ್ಲಿ ನಡೆಯುವ ಸಮ್ಮೇಳನಕ್ಕೆ ಪ್ರತಿಯೊಬ್ಬರ ಪಾಲುದಾರಿಕೆ ಬಹಳ ಮುಖ್ಯ’ ಎಂದು ದೀಪಾ ಚೋಳನ್ ತಿಳಿಸಿದರು.

ನೆರವಿನ ಹಸ್ತ:ರಾಯಚೂರಿನಲ್ಲಿ ಮಿಲ್‌ ಮಾಲೀಕರು ಮತ್ತು ಹಟ್ಟಿ ಚಿನ್ನದ ಗಣಿಯವರು ಸೇರಿ ಊಟದ ಖರ್ಚನ್ನು ವಹಿಸಿಕೊಂಡಿದ್ದರು. ‘ಜೈನ ಮಿಲನ್‌’ದವರೂ ಸಾಕಷ್ಟು ಜವಾಬ್ದಾರಿ ವಹಿಸಿಕೊಂಡಿದ್ದರು. ಹೀಗಾಗಿ ಸಮ್ಮೇಳನದ ದೊಡ್ಡ ಹೊರೆ ಕಡಿಮೆಯಾಗಿತ್ತು. ಇಂಥದ್ದೇ ನೆರವನ್ನು ಇಲ್ಲೂ ನಿರೀಕ್ಷಿಸಲಾಗುತ್ತಿದೆ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.

* ಹೆಚ್ಚುವರಿ ಅನುದಾನಕ್ಕಾಗಿ ಸೋಮವಾರ ಮರು ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರ ಇನ್ನಷ್ಟು ನೆರವು ನೀಡುವ ಭರವಸೆ ಇದೆ.

ದೀಪಾ ಚೋಳನ್,ಜಿಲ್ಲಾಧಿಕಾರಿ

ಮುಖ್ಯಾಂಶಗಳು

* ರಾಯಚೂರು ಸಮ್ಮೇಳನಕ್ಕೆ ₹6 ಕೋಟಿ

* ಮೈಸೂರು ಸಮ್ಮೇಳನಕ್ಕೆ ₹8 ಕೋಟಿ

* ಮಠಮಾನ್ಯಗಳಿಂದ, ವರ್ತಕರಿಂದ ನೆರವು ಕೋರಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.