ADVERTISEMENT

ತೊಗರಿ ಕಣಜದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು

ಸುಕೃತ ಎಸ್.
Published 4 ಫೆಬ್ರುವರಿ 2020, 20:22 IST
Last Updated 4 ಫೆಬ್ರುವರಿ 2020, 20:22 IST
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಗೆ ಮಂಗಳವಾರ ಸಂಜೆ ಅಂತಿಮ ಸ್ಪರ್ಶ ನೀಡಲಾಯಿತು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಗೆ ಮಂಗಳವಾರ ಸಂಜೆ ಅಂತಿಮ ಸ್ಪರ್ಶ ನೀಡಲಾಯಿತು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌   

ಕಲಬುರ್ಗಿ:ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಗರಿ ಕಣಜ ಸಿದ್ಧಗೊಂಡಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ 35 ಎಕರೆ ವಿಶಾಲ ಜಾಗದಲ್ಲಿ ಮಂಟಪ ತಲೆ ಎತ್ತಿದೆ.ದ್ವಾರದ ಮುಂದೆ ಮಂದಸ್ಮಿತ ಬೀರುತ್ತಿರುವ ಬಸವಣ್ಣನ ಮೂರ್ತಿ ‘ಇವ ನಮ್ಮವ’ ಎನ್ನುತ್ತ ಬಂದವರೆಲ್ಲರನ್ನೂ ಪ್ರೀತಿಯಿಂದ ಒಳಗೆ ಬರಮಾಡಿಕೊಳ್ಳುತ್ತಿದೆ.

‘ಕಡಕೋಳ ಮಡಿವಾಳೇಶ್ವರ’ ಮಹಾದ್ವಾರದ ಒಳಹೊಕ್ಕರೆ ಭವ್ಯ ಸಭಾಂಗಣ ಕಾಣುತ್ತದೆ. ಅದೇ ಶ್ರೀವಿಜಯ ಪ್ರಧಾನ ವೇದಿಕೆ. ಸಭಾಂ ಗಣದ ಒಳಗೆ ಅಡಿ ಇಟ್ಟು ತಲೆ ಮೇಲೆ ಎತ್ತಿದರೆ, ಕವಿಗಳ ವಾಣಿಗಳನ್ನೂ ತೂಗು ಹಾಕಲಾಗಿದೆ. ಕುವೆಂಪು, ಬೇಂದ್ರೆ, ಜಿ.‍ಪಿ. ರಾಜರತ್ನಂ, ಗೋಪಾಲಕೃಷ್ಣ ಅಡಿಗರು–ಹೀಗೆ ಅನೇಕ ದಿಗ್ಗಜರ ಪ್ರಸಿದ್ಧ ಕವಿತೆಗಳ ಸಾಲುಗಳನ್ನು ತೂಗುಹಾಕಲಾಗಿದೆ.

ADVERTISEMENT

ಸಮ್ಮೇಳನದಲ್ಲಿ ಭಾಗವಹಿಸಲು ನಗರಕ್ಕೆ ಬಂದಿರುವ ಕಲಾ ತಂಡಗಳು ಅಂತಿಮ ಹಂತದ ತಾಲೀಮಿನಲ್ಲಿ ತೊಡಗಿಕೊಂಡಿದ್ದವು. ಸಮ್ಮೇಳನದ ಆಯೋಜಕರು, ಪದಾಧಿಕಾರಿಗಳು, ಪೊಲೀಸರು ಎಲ್ಲೆಡೆ ಓಡಾಡುತ್ತ ಸಿದ್ಧತೆ, ಬಂದೋಬಸ್ತ್‌ ಬಗ್ಗೆ ನಿಗಾ ಇರಿಸುತ್ತಿದ್ದರು. ಸುಮಾರು ನಾಲ್ಕು ಸಾವಿರ ಪೊಲೀಸ್‌ ಸಿಬ್ಬಂದಿ ಇಲ್ಲಿ ಕಾರ್ಯನಿರತರಾಗಿದ್ದಾರೆ.

ಊಟದ ಮನೆ: ಸಾಹಿತ್ಯದ ರಸ ಅನುಭವಿಸಲು ಬಂದವರಿಗೆ ಪಾಕ ರಸದ ರುಚಿ ಬಡಿಸಲು ತಯಾರಿ ನಡೆಯುತ್ತಿದೆ. ದಿನಕ್ಕೆ ಎರಡು ಲಕ್ಷ ಮಂದಿಗೆ ಊಟ ಬಡಿಸಲು ಸಿದ್ಧತೆ ನಡೆದಿದೆ.ಬಂದವರಿಗಾಗಿ ಮೈಸೂರು ಪಾಕು, ಶೇಂಗಾ ಹೋಳಿಗೆ, ಜೋಳದ ರೊಟ್ಟಿ ಹೀಗೆ ವಿವಿಧ ಖಾದ್ಯಗಳನ್ನು ಬಡಿಸುವ ತಯಾರಿ ಸಾಗಿದೆ. ಸಮ್ಮೇ ಳನದ ಮುಖ್ಯ ವೇದಿಕೆ ಪಕ್ಕದಲ್ಲೇ ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ.

ಸಿಂಗಾರಗೊಂಡಿರುವ ನಗರ: ಇಡೀ ಕಲಬುರ್ಗಿ ನಗರ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರ ಬರಮಾಡಿಕೊಳ್ಳಲು ತಯಾರಾಗಿ ನಿಂತಿದೆ. ಇಲ್ಲಿನ ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಗೋಡೆಗಳ ಮೇಲೆ ಕಲಬುರ್ಗಿ ಸುತ್ತಮುತ್ತಲಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾ ಲೋಕವೇ ಅನಾವರಣಗೊಂಡಿದೆ.

ವೃತ್ತಗಳಲ್ಲಿ ಸ್ಥಾಪಿಸಲಾದ ಪ್ರತಿಮೆ ಗಳ ಸುತ್ತಲೂ ಹಾಕಿರುವ ರಂಗಿನ ರಂಗೋಲಿಗಳು ಆಕರ್ಷಕವಾಗಿವೆ. ಎಲ್ಲೆಲ್ಲೂ ಕನ್ನಡದ ಬಾವುಟ‌ ಹಾರಾಡುತ್ತಿವೆ.ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಮಾಡಿರುವ ಸಿಂಗಾರವೇ ನಮ್ಮನ್ನು ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆದೊಯ್ಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.