ADVERTISEMENT

84ನೇ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 20:21 IST
Last Updated 16 ನವೆಂಬರ್ 2018, 20:21 IST
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ   

ಧಾರವಾಡ: ಧಾರವಾಡದಲ್ಲಿ ನಡೆಸಲು ಉದ್ದೇಶಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಮತ್ತು ಅಂತರ್ಜಾಲ ತಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು.

ಹುಬ್ಬಳ್ಳಿ–ಧಾರವಾಡವನ್ನು ಪ್ರತಿನಿಧಿಸುವ ಲಾಂಛನದಲ್ಲಿ, ಧಾರವಾಡದ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಇದೆ. ಧಾರವಾಡವು ಸಂಗೀತದ ನೆಲೆವೀಡಾಗಿರುವುದರಿಂದ ಸಂಗೀತ ಸಾಧನಗಳನ್ನು ಅಳವಡಿಸಲಾಗಿದೆ.

abkssdwd.org ಅಂತರ್ಜಾಲ ತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ದೇಶಪಾಂಡೆ, ‘ಸಮ್ಮೇಳನದ ಆಯೋಜನೆಗೆ ಜಿಲ್ಲಾಡಳಿತವು ₹12 ಕೋಟಿ ಪ್ರಸ್ತಾವ ಇಟ್ಟಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರೊಂದಿಗೆ ಚರ್ಚಿಸಿದ್ದು, ಮುಖ್ಯಮಂತ್ರಿ ಅವರಿಗೂ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ADVERTISEMENT

ಜಿಲ್ಲಾಧಿಕಾರಿಗೆ ಸ್ಥಳ ನಿಗದಿ ಹೊಣೆ:

ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಮ್ಮೇಳನದ ಸ್ಥಳ ನಿಗದಿ ಕುರಿತ ಗೊಂದಲಕ್ಕೆ ತೆರೆ ಬೀಳುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. ಸಮಿತಿಯ ಸದಸ್ಯರು ಒಮ್ಮತದ ನಿರ್ಧಾರ ಕೈಗೊಳ್ಳಬೇಕು ಎಂದ ಸಚಿವರು, ಶನಿವಾರ ಈ ಬಗ್ಗೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದರು.

ಈ ಮೊದಲು ಕರ್ನಾಟಕ ಕಾಲೇಜಿನಲ್ಲಿ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ನಂತರ ಸ್ಥಳಾವಕಾಶದ ದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಊರ ಹೊರವಲಯದಲ್ಲಿ ಸಮ್ಮೇಳನ ನಡೆಸುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಶುಕ್ರವಾರದ ಸಭೆ ಕೂಡ ಈ ಬಗ್ಗೆ ನಿರ್ಧಾರಕ್ಕೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.