ADVERTISEMENT

ಕಾಂತಾರ ಚಿತ್ರೀಕರಣ; ನೀರಿನಲ್ಲಿ ಮಗುಚಿದ ಪ್ಲಾಸ್ಟಿಕ್ ಅಟ್ಟಣಿಗೆ, ಕಲಾವಿದರು ಪಾರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 8:29 IST
Last Updated 15 ಜೂನ್ 2025, 8:29 IST
   

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದಲ್ಲಿ ಕಾಂತಾರ ಚಾಪ್ಟರ್-1 ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಜಲಾಶಯದ ನೀರಿನ ಮೇಲೆ ಹಾಕಿದ್ದ ಪ್ಲಾಸ್ಟಿಕ್ ನ ತೇಲುವ ಅಟ್ಟಣಿಗೆ ಶನಿವಾರ ಸಂಜೆ ಮಳೆ-ಗಾಳಿಗೆ ಮಗುಚಿದೆ. ಈ ವೇಳೆ ಅಲ್ಲಿ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಇದ್ದರು. ಯಾರಿಗೂ ತೊಂದರೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಚಿತ್ರೀಕರಣ ಸ್ಥಳದಲ್ಲಿ ಭಾರೀ ದುರಂತ ಸಂಭವಿಸಿದೆ. ದೋಣಿ ಮುಳುಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವು ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಶಿವಮೊಗ್ಗ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಹೊಸನಗರ ಠಾಣೆ ಸಿಪಿಐ ಅವರನ್ನು ಕಳಿಸಿದ್ದೇನೆ. ಜಲಾಶಯದ ನೀರಿನ ಮೇಲೆ ಹಾಕಿದ್ದ ತೇಲುವ ಅಟ್ಟಣಿಗೆ ಮಗುಚಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದರು.

ADVERTISEMENT

ಮಾಣಿ ಜಲಾಶಯದಲ್ಲಿ ಚಿತ್ರೀಕರಣಕ್ಕೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಹಾಗೂ ಸ್ಥಳೀಯವಾಗಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಹೊಸನಗರ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಎಸ್ಪಿ ತಿಳಿಸಿದರು.

ಚಿತ್ರೀಕರಣಕ್ಕೆ ಜಿಲ್ಲಾಡಳಿತದಿಂದ ಅನುಮತಿ ಪಡೆದಿಲ್ಲ. ಬೆಂಗಳೂರಿನಿಂದಲೇ ಅನುಮತಿ ಪಡೆದಿರುವುದಾಗಿ ಚಿತ್ರ ತಂಡದವರು ಹೇಳಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಆಗುಂಬೆಯಲ್ಲಿ ಕಳೆದ ವಾರ ಕಾಂತಾರ ಚಾಪ್ಟರ್-1 ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಕೇರಳದ ಕಲಾವಿದರೊಬ್ಬರು ತಾವು ಉಳಿದುಕೊಂಡಿದ್ದ ಹೋಂ ಸ್ಟೇನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.