ADVERTISEMENT

ಕಾಂತರಾಜು ವರದಿ: ಸದ್ಯಕ್ಕೆ ಕ್ರಮ ಇಲ್ಲ-ಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 0:06 IST
Last Updated 22 ಮಾರ್ಚ್ 2024, 0:06 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಜೂನ್ 6ರವರೆಗೆ ಸರ್ಕಾರದಿಂದ ಮುಂದಿನ ಯಾವುದೇ ಕ್ರಮ ಜರುಗುವುದಿಲ್ಲ’ ಎಂದು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.

ವರದಿ ಸಲ್ಲಿಕೆ ಆಕ್ಷೇಪಿಸಿ ನಗರದ ‘ಸಮಾಜ ಸಂಪರ್ಕ ವೇದಿಕೆ’ ಅಧ್ಯಕ್ಷ ಜಿ.ಎನ್‌.ಶ್ರೀಕಂಠಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಭಿಷೇಕ್ ಕುಮಾರ್ ವಾದ ಮಂಡಿಸಿ, ‘ವರದಿ ಸಲ್ಲಿಸುವಾಗ ಆಯೋಗದ ಕಾರ್ಯದರ್ಶಿ ಅದಕ್ಕೆ ಸಹಿ ಮಾಡಿಲ್ಲ.  ಆಯೋಗ ಸ್ವತಂತ್ರವಾಗಿ ಸಮೀಕ್ಷೆ ನಡೆಸಿರುವ ಬಗ್ಗೆ ಹಾಗೂ ವರದಿ ಬಗ್ಗೆ ಸಾಕಷ್ಟು ಅನುಮಾನವಿದೆ. ಈ ವರದಿಯು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು. ಅದಕ್ಕೆಂದೇ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಡಿಬಿಡಿಯಲ್ಲಿ ಸ್ವೀಕರಿಸಿದೆ’ ಎಂದು ಬಲವಾಗಿ ಆಕ್ಷೇಪಿಸಿದರು. 

ADVERTISEMENT

ಇದನ್ನು ಅಲ್ಲಗಳೆದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ‘ಚುನಾವಣೆ ಘೋಷಣೆಗೂ ಮುನ್ನವೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಚುನಾವಣೆ ಘೋಷಣೆಗೂ, ಚುನಾವಣೆ ಜರುಗುವುದಕ್ಕೂ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಆಯೋಗದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸರ್ಕಾರ ವರದಿಯನ್ನು ಸ್ವೀಕರಿಸಿದೆ ಅಷ್ಟೇ’ ಎಂದು ವಿವರಿಸಿದರು.

ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ‘54 ಅಂಶಗಳನ್ನು ಆಧರಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಕಲಂ 11ರ ಪ್ರಕಾರ ಸಮೀಕ್ಷಾ ವರದಿಗೆ ತನ್ನದೇ ಆದ ಶಾಸನಬದ್ಧತೆ ಇದೆ. ಬಿಹಾರದಲ್ಲೂ ಇಂತಹ ಸಮೀಕ್ಷೆ ನಡೆಸಲಾಗಿದೆ. ಒಡಿಶಾದಲ್ಲಿ ನಡೆಯುತ್ತಿದೆ. ಅಂತೆಯೇ, ತಮಿಳುನಾಡಿನಲ್ಲೂ ಪ್ರಾರಂಭವಾಗಿದೆ’ ಎಂದು ಅರುಹಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜೊತೆಗೇ ‘ಸಮಾಜ ಸಂಪರ್ಕ ವೇದಿಕೆ‘ಯ ಅರ್ಜಿಯನ್ನೂ ಪರಿಗಣಿಸಲಾಗುವುದು ಎಂದು ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?

’ಎಚ್.ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ವರದಿಯ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ದೇಶಿಸಬೇಕು. ಸಮೀಕ್ಷೆ ನಡೆಸಲು ಎಚ್.ಕಾಂತರಾಜು ಆಯೋಗಕ್ಕೆ 2014ರ ಜನವರಿ 21ರಂದು ಸರ್ಕಾರ ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಕಲಂ 9(1) ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ(ತಿದ್ದುಪಡಿ)–2014ರ ಕಲಂ 3 ಅನ್ನು
ರದ್ದುಪಡಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಚಿವ ಸಂಪುಟದ ಸಭೆ ನಡೆಯುವುದಿಲ್ಲ. ಹೀಗಾಗಿ, ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಚುನಾವಣೆ ಮುಗಿಯುವವರೆಗೆ ಯಾವುದೇ ಮುಂದಿನ ಕ್ರಮ ಜರುಗುವುದಿಲ್ಲ.
ಕೆ.ಶಶಿಕಿರಣ ಶೆಟ್ಟಿ, ಅಡ್ವೊಕೇಟ್‌ ಜನರಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.