ADVERTISEMENT

ಕಪ್ಪತಗುಡ್ಡ ಚಿನ್ನದ ಮೇಲೆ ‘ಗಣಿ’ ಕಣ್ಣು: ಸಿ.ಎಂ ಕೈಯಲ್ಲಿದೆ ಭವಿಷ್ಯ

ವನ್ಯಜೀವಿಧಾಮ ಹಣೆ ಬರಹ ನಾಳೆ ನಿರ್ಧಾರ: ಮುಖ್ಯಮಂತ್ರಿ ಕೈಯಲ್ಲಿದೆ ಅರಣ್ಯದ ಭವಿಷ್ಯ

ಎಸ್.ರವಿಪ್ರಕಾಶ್
Published 24 ಸೆಪ್ಟೆಂಬರ್ 2019, 20:05 IST
Last Updated 24 ಸೆಪ್ಟೆಂಬರ್ 2019, 20:05 IST
ಕಪ್ಪತಗುಡ್ಡ
ಕಪ್ಪತಗುಡ್ಡ   

ಬೆಂಗಳೂರು: ಅಪಾರ ಜೀವ ವೈವಿಧ್ಯತೆಯ ಆಗರವಾಗಿರುವ ಕಪ್ಪತಗುಡ್ಡದ ಮೇಲೆ ಮತ್ತೆ ಗಣಿ ಉದ್ಯಮಿಗಳ ಕಣ್ಣು ಬಿದ್ದಿದೆ.

ಗದಗ ಜಿಲ್ಲೆ ಕಪ್ಪತಗುಡ್ಡ ‘ವನ್ಯಜೀವಿಧಾಮ’ ಸ್ಥಾನಮಾನ ರದ್ದುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿದೆ. ಗುರುವಾರ ವನ್ಯಜೀವಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ‘ವನ್ಯಜೀವಿ’ಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

‘ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದುಗೊಳಿಸಲು ಪ್ರಭಾವಿ ಗಣಿ ಕಂಪನಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ಸ್ಥಳೀಯರನ್ನೂ ಬಳಕೆ ಮಾಡಿಕೊಳ್ಳುತ್ತಿವೆ. ಇಲ್ಲಿರುವ ಚಿನ್ನದ ಅದಿರು ನಿಕ್ಷೇಪದ ಮೇಲೆ ಈ ಕಂಪನಿಗಳ ಕಣ್ಣು ನೆಟ್ಟಿವೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದು ಮಾಡಿದರೆ, ಅದರಿಂದ ಗಣಿಗಾರಿಕೆಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಕಂಪನಿಗಳು ಜನರನ್ನು ಮುಂದಿಟ್ಟುಕೊಂಡು ಮರೆಯಿಂದ ಸಮರ ನಡೆಸುತ್ತಿವೆ. ಗದಗ ಜಿಲ್ಲೆ ಒಣ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಶೇ 6 ರಷ್ಟು ಮಾತ್ರ ಅರಣ್ಯಭೂಮಿ ಇದೆ. ಕಪ್ಪತಗುಡ್ಡದಲ್ಲಿ ಶೇ 5 ರಷ್ಟು ಅರಣ್ಯವಿದೆ. ಒಟ್ಟು 32 ಸಾವಿರ ಹೆಕ್ಟೇರ್‌ನಲ್ಲಿ 25,000 ಹೆಕ್ಟೇರ್‌ ಅರಣ್ಯ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ವ್ಯಾಪಿಸಿದೆ.

ಈ ಪ್ರದೇಶವು ಅಪರೂಪದ ಗಿಡಮೂಲಿಕೆಗಳು ಮತ್ತು ಔಷಧಿಯ ಸಸ್ಯಗಳ ಆಗರ. ಅಲ್ಲದೇ, ವನ್ಯಜೀವಿಗಳ ಆವಾಸ ಸ್ಥಾನವೂ ಆಗಿದೆ. ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಇತರ ಪ್ರಮುಖರ ಹೋರಾಟದ ಪರಿಣಾಮ ಈ ಪ್ರದೇಶ ಮೂಲಸ್ವರೂಪದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ.

ಅರಣ್ಯ ಇಲಾಖೆ ಮೇಲೆ ಒತ್ತಡ:ವನ್ಯಜೀವಿಧಾಮ ಸ್ಥಾನಮಾನ ಹಿಂದಕ್ಕೆ ಪಡೆಯುವಂತೆ ಕಾಣದ ಕೈಗಳ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಧಾಮ ಎಂದು ಘೋಷಿಸಿದ ಅಧಿಸೂಚನೆಯನ್ನು ಡಿನೋಟಿಫೈ ಮಾಡುವಂತೆ ಸಲ್ಲಿಕೆಯಾದ ಕಡತ ಮುಖ್ಯಮಂತ್ರಿ ಅವರ ಮುಂದೆ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾದರೂ ಇಲ್ಲಿ ಹಾದಿ ಸುಗಮ ಮಾಡಿಕೊಂಡರೆ, ಕೇಂದ್ರದಲ್ಲಿ ನಿಭಾಯಿಸಬಹುದು ಎಂಬುದು ಗಣಿ ಕಂಪನಿಗಳ ಲೆಕ್ಕಾಚಾರ ಎನ್ನುತ್ತವೆ ಮೂಲಗಳು.

ವನ್ಯಜೀವಿ ಧಾಮದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ನೀಡಲಾಗುತ್ತಿಲ್ಲ. ಅದಕ್ಕೆ ಅವಕಾಶ ನೀಡಲು ವನ್ಯಜೀವಿಧಾಮ ಸ್ಥಾನಮಾನ ರದ್ದು ಮಾಡಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಲ್ಡೋಟಾದಿಂದ ಚಿನ್ನ ನಿಕ್ಷೇಪ ಸಮೀಕ್ಷೆ

ಬಲ್ಡೋಟಾ ಕಂಪನಿ ಸುಮಾರು 20 ವರ್ಷಗಳಷ್ಟು ಹಿಂದೆ ಇಲ್ಲಿ ಚಿನ್ನದ ನಿಕ್ಷೇಪ ಇದೆಯೆ ಎಂಬ ಸಮೀಕ್ಷೆ ಮಾಡಿಸಿತ್ತು. ಆ ಪ್ರಕಾರ, ಈ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಚಿನ್ನ ಇರುವುದು ಪತ್ತೆ ಆಗಿತ್ತು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಬಲ್ಡೋಟಾ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಲೀಸ್‌ ಕೂಡ ಪಡೆದಿದೆ. ಸ್ಥಳೀಯರ ಹೋರಾಟದಿಂದ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ಕಪ್ಪತಗುಡ್ಡಕ್ಕಾಗಿ ಪ್ರಾಣ ನೀಡಲು ಸಿದ್ಧ

2003 ರಿಂದ ನಿರಂತರ ಹೋರಾಟದಿಂದ ಸಂರಕ್ಷಿತ ಅರಣ್ಯ ಸ್ಥಾನಮಾನ ಉಳಿಸಿಕೊಳ್ಳಲಾಯಿತು. ನಮ್ಮ ಹೋರಾಟದಿಂದಲೇ ವನ್ಯಜೀವಿಧಾಮದ ಸ್ಥಾನಮಾನವೂ ಸಿಕ್ಕಿತು. ಈಗ ಸರ್ಕಾರ ಏಕಮುಖಿಯಾಗಿ ನಿರ್ಣಯ ತೆಗೆದುಕೊಳ್ಳಲು ಮುಂದಾದರೆ, ಬೀದಿಗಿಳಿಯಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.