ಬೆಂಗಳೂರು: 'ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯದ ಕಾಂಗ್ರೆಸ್ ಸರ್ಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, 'ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ಅತೀವ ನೋವುಂಟು ಮಾಡಿದೆ' ಎಂದು ಹೇಳಿದ್ದಾರೆ.
'ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರ್ಕಾರ ಕಿವುಡಾಗಿತ್ತು, ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ' ಎಂದು ಹೇಳಿದ್ದಾರೆ.
'ಸರ್ಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ ಅದಕ್ಕೆ ಸರ್ಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.