ADVERTISEMENT

ನಾಯಿ ಸಾವಿಗೆ ಕಣ್ಣೀರು ಹಾಕಿದ್ದು ಯಾರು: ಬಿಜೆಪಿಗೆ ಎಚ್‌ಡಿಕೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:30 IST
Last Updated 2 ಆಗಸ್ಟ್ 2022, 21:30 IST
ಎಚ್.‌ಡಿ.ಕುಮಾರಸ್ವಾಮಿ
ಎಚ್.‌ಡಿ.ಕುಮಾರಸ್ವಾಮಿ   

ಬೆಂಗಳೂರು: ತಮ್ಮ ಕಣ್ಣೀರಿನ ಬಗ್ಗೆ ಕೆಣಕಿದ ಬಿಜೆಪಿ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಸಿನಿಮಾದಲ್ಲಿ ನಾಯಿ ಸತ್ತ ದೃಶ್ಯ ನೋಡಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ ಮಹಾಶಯ ಯಾವ ಪಕ್ಷದ ಮುಖ್ಯಮಂತ್ರಿ’ ಎಂದು ಕುಟುಕಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ನಾಗಮಂಗಲದ ಜೆಡಿಎಸ್ ಸಮಾವೇಶವನ್ನು ತಂದೆಯವರು ಬೆಂಗಳೂರಿನ ನಿವಾಸದಿಂದಲೇ ನೇರ ವೀಕ್ಷಣೆ ಮಾಡಿದಾಗ ನಾನು, ನನ್ನ ಅಣ್ಣ, ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದನ್ನು ಬಿಜೆಪಿ ವಿಕೃತವಾಗಿ ತಿರುಚಿದೆ. ಇದೇನಾ ಸಂಘ ಕಲಿಸಿದ ಸಂಸ್ಕಾರ? ಛೇ!’ ಎಂದು ಛೇಡಿಸಿದ್ದಾರೆ.

‘ಆಪರೇಷನ್‌ ಕಮಲವನ್ನೇ ನೆಚ್ಚಿಕೊಂಡ ಬಿಜೆಪಿ ವಿಕೃತ, ವಿಲಕ್ಷಣ, ವಿನಾಶಕಾರಿ ಪಕ್ಷ.ಬಡ ಯುವಕರ ರಕ್ತವೇ ಅವರ ಪಾಲಿನ ಅಧಿಕಾರಾಮೃತ. ಕಗ್ಗೊಲೆಗಳೇ ಅದರ ಕಸುಬು, ಅದೆಷ್ಟು ಹೆತ್ತ ಕರುಳುಗಳು ಕಣ್ಣೀರಿಡುತ್ತಿವೆ. ಅದಕ್ಕೆ ಉತ್ತರ ಕೊಡುವ ನೈತಿಕತೆ ಇದೆಯಾ? ವಿಧಾನಸೌಧದಲ್ಲಿ ವಿದಾಯ ಭಾಷಣ ಮಾಡುತ್ತಾ ವೇದಿಕೆಯಲ್ಲೇ ಕಣ್ಣೀರಧಾರೆ ಹರಿಸಿದವರು ಯಾವ ಪಕ್ಷದವರು? ಇದಕ್ಕೆ ಉತ್ತರಿಸಿ. ಆ ಮೇಲೆ ನನ್ನ ಕಣ್ಣೀರ ಬಗ್ಗೆ ಮಾತನಾಡಿ’ ಎಂದು ಕಾಲೆಳೆದಿದ್ದಾರೆ.

ADVERTISEMENT

‘30 ಸೀಟು ಉಳಿಸಿಕೊಳ್ಳಲು ನಾವು ಹೆಣಗುತ್ತಿದ್ದೇವೆ ಎನ್ನುತ್ತೀರಿ. ಅಧಿಕಾರಕ್ಕಾಗಿ ಇದೇ 30 ಸೀಟಿನ ಪಕ್ಷದ ಬಾಗಿಲಿಗೆ ಬಂದು ನಿಂತಿದ್ದನ್ನು ಮರೆತುಬಿಟ್ಟಿರಾ? ದೇಶದ ತುಂಬ ‘ಆಪರೇಷನ್‌ ಕಮಲದ ಗಬ್ಬುನಾತ ಹಬ್ಬಿದೆ. ಅಸಹ್ಯ ಎನಿಸುವುದಿಲ್ಲವೇ ನಿಮಗೆ?’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.