
ಬೆಳಗಾವಿ (ಸುವರ್ಣ ವಿಧಾನಸೌಧ): ‘ರಾಜ್ಯದಲ್ಲಿ 2023ರಿಂದ ಈವರೆಗೆ (ನ. 15ರವರೆಗೆ) 57,733 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ₹ 5,474 ಕೋಟಿ ವಂಚನೆ ನಡೆದಿದೆ. ಈ ಪೈಕಿ, 10,717 ಪ್ರಕರಣಗಳನ್ನು ಪತ್ತೆ ಹಚ್ಚಿ ₹ 627 ಕೋಟಿ ವಸೂಲು ಮಾಡಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಸಿಮೆಂಟ್ ಮಂಜು ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶ- ವಿದೇಶಗಳಲ್ಲಿ ಇಂದು ಆನ್‌ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ. ಕಳ್ಳತನ, ಸುಲಿಗೆ, ದರೋಡೆ, ಡಕಾಯಿತಿ ಪ್ರಕರಣಗಳಿಗಿಂತ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.
‘ಆನ್‌ಲೈನ್ ಗೇಮ್ಸ್ ನಿರ್ಬಂಧಿಸಲು ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆಗೆ ತಾಂತ್ರಿಕ ಅಂಶಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದರ ವಿರುದ್ಧ ಇಂಡಿಯನ್ ಗೇಮಿಂಗ್ ಫೆಡರೇಷನ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ. ಸರ್ಕಾರ ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದೇ 19ಕ್ಕೆ ವಿಚಾರಣೆಗೆ ಬರಲಿದೆ’ ಎಂದರು.
‘ಸೈಬರ್ ಅಪರಾಧ ಸಂಭವಿಸಿದಾಗ ‘ಸುವರ್ಣ ಅವಧಿ’ಯ ಒಳಗೆ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಂಡರೆ ಪತ್ತೆ ಕಾರ್ಯಕ್ಕೆ ನೆರವಾಗಲಿದೆ. ಹೀಗಾಗಿ, ರಾಜ್ಯ ಗೃಹ ಇಲಾಖೆಯಿಂದಲೇ ಸಹಾಯವಾಣಿ ಆರಂಭಿಸಬೇಕು’ ಎಂದು ಸಿಮೆಂಟ್ ಮಂಜು ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕವಾಗಿ ಡಿಜಿಪಿ ಶ್ರೇಣಿ ಅಧಿಕಾರಿಯ ನೇತೃತ್ವದಲ್ಲಿ ವಿಭಾಗವನ್ನೇ ಸೃಜಿಸಿರುವುದು ದೇಶದಲ್ಲೇ ಪ್ರಥಮವೆನಿಸಿದೆ. ರಾಜ್ಯದಲ್ಲಿ 43 ಸೈಬರ್ ಅಪರಾಧ ತನಿಖಾ ಠಾಣೆಗಳನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.