ADVERTISEMENT

ಪಿಯುಸಿ: ವಿದ್ಯಾರ್ಥಿನಿಯರದ್ದೇ ಹೆಗ್ಗಳಿಕೆ

ದ್ವಿತೀಯ ಪಿಯುಸಿ ಫಲಿತಾಂಶ: ಶೇ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 19:44 IST
Last Updated 18 ಜೂನ್ 2022, 19:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2021–22ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಶನಿವಾರ ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘2019–20ನೇ ಸಾಲಿನಲ್ಲಿ ಶೇ 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ’ ಎಂದರು.

ಕೋವಿಡ್‌ ಕಾರಣದಿಂದ 2020–21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿರಲಿಲ್ಲ. ಅದಕ್ಕೂ ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿಗಳು ತೋರಿದ್ದ ಸಾಧನೆ ಪರಿಗಣಿಸಿ ಮುಂದಿನ ತರಗತಿಗೆ ಬಡ್ತಿ ನೀಡಲಾಗಿತ್ತು. ಹೀಗಾಗಿ, ಈ ಬಾರಿಯ ಫಲಿತಾಂಶವನ್ನು 2019–20ನೇ ಸಾಲಿನ ಫಲಿತಾಂಶಕ್ಕೆ ಹೋಲಿಸಲಾಗಿದೆ. ಹಿಜಾಬ್‌ ಗದ್ದಲದ ಮಧ್ಯೆ ಈ ಬಾರಿ ಪರೀಕ್ಷೆ ನಡೆದಿತ್ತು.

ADVERTISEMENT

‘2019–20ನೇ ಸಾಲಿನಲ್ಲಿ ನಗರಭಾಗದಲ್ಲಿನ ಕಾಲೇಜುಗಳ ಫಲಿತಾಂಶ ಉತ್ತಮವಾಗಿತ್ತು. ಈ ಬಾರಿ ಗ್ರಾಮಾಂತರ ಪ್ರದೇಶಗಳ ಕಾಲೇಜುಗಳ ಫಲಿತಾಂಶ ಉತ್ತಮವಾಗಿದೆ’ ಎಂದು ಸಚಿವರು ಹೇಳಿದರು.

‘4 ಸರ್ಕಾರಿ, 2 ಅನುದಾನಿತ, 50 ಅನುದಾನರಹಿತ ಸೇರಿ ಒಟ್ಟು 56 ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಯಾವುದೇ ಕಾಲೇಜಿನಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ’ ಎಂದರು.

‘ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯೂ ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ಮೂರು ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಶನಿವಾರದಿಂದಲೇ ಅವಕಾಶ ಕಲ್ಪಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಮರುಮೌಲ್ಯಮಾಪನ ಫಲಿತಾಂಶಕ್ಕೆ ಕಾಯದೇ, ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವುದು ಉತ್ತಮ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ’ ಎಂದರು.

ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ಕಿಸಿ: www.karresults.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.