ADVERTISEMENT

40 ಪರ್ಸೆಂಟ್ ಕಮಿಷನ್ ಆರೋಪ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2022, 13:54 IST
Last Updated 24 ಆಗಸ್ಟ್ 2022, 13:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಂದ ಶೇಕಡ 40ರಷ್ಟು ಲಂಚ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದಾದರೆ ಮತ್ತು ಬಿಜೆಪಿ ನಾಯಕರಿಗೆ ತಮ್ಮ ಪ್ರಾಮಾಣಿಕತೆ ಬಗ್ಗೆ ಅಷ್ಟೊಂದು ಭರವಸೆ ಇದ್ದರೆ ಶೇಕಡ 40ರಷ್ಟು ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಮ್ಮ ಮೇಲಿರುವ ಆರೋಪದಿಂದ ಮುಕ್ತಿ ಹೊಂದಲಿ ಎಂದು ಸವಾಲು ಹಾಕಿದರು.

ನ್ಯಾಯಾಂಗ ತನಿಖೆ ನಡೆಸಿದರೆ ಸರ್ಕಾರದ ಭ್ರಷ್ಟಾಚಾರವನ್ನು ನಾವು ಸಾಬೀತು ಮಾಡುತ್ತೇವೆ, ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ನಮ್ಮ ಮೇಲೆ ಬೇಕಾದ ಕಾನೂನು ಕ್ರಮ ಜರುಗಿಸಿ ಎಂದು ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾರಾದರೂ ಒಬ್ಬನೇ ಒಬ್ಬ ಪ್ರಾಮಾಣಿಕ ವ್ಯಕ್ತಿ ಇದ್ದರೆ ಈ ಸವಾಲು ಸ್ವೀಕರಿಸಲಿ ಎಂದು ಹೇಳಿದರು.

ADVERTISEMENT

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಬರೆದ ಪತ್ರವನ್ನು ನೋಡಿದ್ದು ಬಿಟ್ಟರೆ ಅವರ ಭೇಟಿ ಸಾಧ್ಯವಾಗಿರಲಿಲ್ಲ. ಒಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಅರಣ್ಯ ಗುತ್ತಿಗೆದಾರರ ಸಂಘದವರು ಬಂದು ಭೇಟಿ ಮಾಡಿ ಸಮಾಲೋಚನೆ ನಡೆಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಕಳೆದ ಏಪ್ರಿಲ್‌ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಬಿಟ್ಟರೆ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ಗುತ್ತಿಗೆದಾರರ ಸಂಘದವರು ನನಗೆ ಮನವಿ ಮಾಡಿದ್ದರು. ಟೆಂಡರ್‌ ಅನುಮೋದನೆಗೆ ಮೊದಲೇ ಶೇ 30 ರಿಂದ ಶೇ 40 ಲಂಚ ಕೊಡಬೇಕಾಗಿದೆ. ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷ ಆದರೂ ಅವರು ಯಾವ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಎಂದು ಇಂದು ಕೆಂಪಣ್ಣನವರು ನನ್ನ ಬಳಿ ಕೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು, ಈಗ ಶರವೇಗದಲ್ಲಿ ಸಾಗುತ್ತಿದೆಯೆಂಬ ಪದಗಳನ್ನು ಬಳಸಿ ಗುತ್ತಿಗೆದಾರರು ಈ ಸರ್ಕಾರದ ಭ್ರಷ್ಟ ಮುಖವನ್ನು ತೆರೆದಿಟ್ಟಿದ್ದಾರೆ. ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿಯಿಂದ ಸುಮಾರು 22,000 ಕೋಟಿಗೂ ಅಧಿಕ ಬಿಲ್ ಹಣ ಬಿಡುಗಡೆಯಾಗಬೇಕಿದೆ ಎಂದು ಹೇಳಿದರು.

ಬಾಕಿ ಇರುವ ಬಿಲ್ ಹಣವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕು, ಜೊತೆಗೆ ಅನುದಾನ ಮೀಸಲಿಡದೆ ಟೆಂಡರ್‌ ಕರೆಯುವುದರಿಂದ ಹಣ ಬಿಡುಗಡೆ ವೇಳೆ ಆಗುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಲು ಒತ್ತಾಯಿಸಬೇಕು ಎಂದು ನನ್ನಲ್ಲಿ ಮನವಿ ಮಾಡಿದ್ದಾರೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಭಂಡ ಬಿಜೆಪಿ ಸರ್ಕಾರವು ನಮ್ಮ ಮಾತಿಗೆ ಕಿವಿಗೊಡದೆ ಹೋದರೆ ಈ ವಿಚಾರವನ್ನು ರಾಜ್ಯದ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ನಾಡಿನ ಪ್ರಜ್ಞಾವಂತ ಜನ ಈ ಬಗ್ಗೆ ಸಂದರ್ಭ ಬಂದಾಗ ಸೂಕ್ತ ತೀರ್ಪು ನೀಡುತ್ತಾರೆಂಬ ನಂಬಿಕೆ ನನಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.