ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಶನಿವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ರಾಜ್ಯದ 13 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ
ಏಳು ಮಂದಿ ಸಮುದ್ರ ಪಾಲಾಗಿದ್ದರೆ, ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
7 ಮಂದಿ ಜಲಸಮಾಧಿ
ಖಾನಾಪುರ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ವೇಳಾಗರ ಸಮುದ್ರ ತೀರದಲ್ಲಿ ಶುಕ್ರವಾರ ರಾಜ್ಯದ ಏಳು ಮಂದಿ ಜಲ ಸಮಾಧಿ ಆಗಿದ್ದಾರೆ. ಕಾಣೆಯಾಗಿದ್ದವರ ಪೈಕಿ ನಾಲ್ವರು ಸುರಕ್ಷಿತವಾಗಿ ಮರಳಿದ್ದಾರೆ.
ಖಾನಾಪುರ ತಾಲ್ಲೂಕಿನ ಲೋಂಡಾದ ಇರ್ಫಾನ್ ಇಸಾಕ್ ಕಿತ್ತೂರ (35), ಅವರ ಪತ್ನಿ ಫರಿನಾ ಇರ್ಫಾನ್ ಕಿತ್ತೂರ್ (31), ಪುತ್ರ ಇಬಾದ್ ಇರ್ಫಾನ್ ಕಿತ್ತೂರ್ (12), ಇರ್ಫಾನ್ ಅವರ ತಮ್ಮನ ಮಗ ಇಕ್ವಾನ್ ಇಮ್ರಾನ್ ಕಿತ್ತೂರ್ (15), ಧಾರವಾಡ ಜಿಲ್ಲೆಯ ಅಳ್ನಾವರದ ನಮೀರಾ ಅಕ್ತರ್ (16) ಮೃತರು. ಮಹಾರಾಷ್ಟ್ರದ ಕುಡಾಳ ಪಟ್ಟಣದ ಫರಾನ್ ಮನಿಯಾರ (25), ಝಕೀರ ಮನಿಯಾರ (13) ಮೃತರು ಎಂದು ತಿಳಿದು ಬಂದಿದೆ.
ಕಾಣೆಯಾಗಿದ್ದ ಇಮ್ರಾನ್ ಇಸಾಕ್ ಕಿತ್ತೂರ್, ಜಬಿನ್ ಇಮ್ರಾನ್ ಕಿತ್ತೂರ್, ಇಜಾನ್ ಇಮ್ರಾನ್ ಕಿತ್ತೂರ್, ಇಸ್ರಾ ಇಮ್ರಾನ್ ಕಿತ್ತೂರ, ಶನಿವಾರ ನಸುಕಿನಲ್ಲಿ ಸಮುದ್ರ ತೀರದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾದರು. ಅವರಿಗೆ ಸಿಂಧುದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲೋಂಡಾ ಗ್ರಾಮದ ಒಂದೇ ಕುಟುಂಬದ ಎಂಟು ಜನ ಶುಕ್ರವಾರ ಸಂಜೆ ಸಮುದ್ರ ತೀರದಲ್ಲಿ ಆಟವಾಡುವಾಗ ದೊಡ್ಡ ಅಲೆಗಳು ಅಪ್ಪಳಿಸಿದ್ದವು ಎಂದು ಮಹಾರಾಷ್ಟ್ರದ ಪೊಲೀಸರು ತಿಳಿಸಿದ್ದಾರೆ.
ಹಾಸನದ ಇಬ್ಬರ ಸಾವು
ಉಡುಪಿ: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದು ನೀರುಪಾಲಾಗಿದ್ದ ಯುವಕನ ಮೃತದೇಹ ಶನಿವಾರ ಪತ್ತೆಯಾಗಿದ್ದು, ಅಸ್ವಸ್ಥಗೊಂಡಿದ್ದ ಇನ್ನೊಬ್ಬ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಾಸನದ ಮಿಥುನ್ (20) ಮೃತದೇಹ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ್ (22) ಕೂಡ ಮೃತಪಟ್ಟಿ ದ್ದಾರೆ. ಏಳು ಮಂದಿ ಯುವಕರ ತಂಡ ಶುಕ್ರವಾರ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿತ್ತು. ಆರು ಮಂದಿ ಯನ್ನು ಲೈಫ್ ಗಾರ್ಡ್‌ಗಳು ರಕ್ಷಿಸಿದ್ದರು. ಶಶಾಂಕ್ ತೀವ್ರ ಅಸ್ವಸ್ಥಗೊಂಡಿದ್ದರು.
ಸ್ಫೋಟ: ಮತ್ತಿಬ್ಬರು ಸಾವು
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿ ನಲ್ಲಿ ಅಡುಗೆ ಅನಿಲ ಸೋರಿ ಸಂಭವಿಸಿದ್ದ ಸ್ಫೋಟದಲ್ಲಿ ಗಾಯಗೊಂಡಿದ್ದವರಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದ ವಕೀಲ ಹಾಲಪ್ಪ ಅವರ ಪತ್ನಿ ಕವಿತಾ (30), ಸಂಬಂಧಿ ಮೈಲಾರಪ್ಪ (45) ಶನಿವಾರ ಮೃತಪಟ್ಟವರು. ಅಂತ್ಯಕ್ರಿಯೆ ಗಾದಿಗನೂರಿನಲ್ಲಿ ನಡೆಯಿತು.
ಅವಘಡದಲ್ಲಿ ಒಟ್ಟು 11 ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರು ಗುಣಮುಖರಾಗಿ, ಮನೆಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.