ADVERTISEMENT

ಬಾರ್, ರೆಸ್ಟೊರೆಂಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2020, 13:43 IST
Last Updated 8 ಮೇ 2020, 13:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಕ್ಲಬ್‌, ಬಾರ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಮೇ 17ರವರೆಗೆ ಹಾಲಿ ದಾಸ್ತಾನು ಇರುವ ಮದ್ಯದ ಮಾರಾಟಕ್ಕೆ ರಾಜ್ಯ ಸರ್ಕಾರವು ಕೆಲ ಷರತ್ತುಗಳೊಂದಿಗೆ ಅವಕಾಶ ನೀಡಿದೆ. ಆಹಾರ ಪದಾರ್ಥಗಳ ಪಾರ್ಸೆಲ್ ಒಯ್ಯಲೂ ಅನುಮತಿ ನೀಡಲಾಗಿದೆ.

ಬಿಯರ್‌ನಂಥ ಪೇಯಗಳಿಗೆ ಕೇವಲ 6 ತಿಂಗಳ ಅಂತಿಮ ದಿನವಿರುತ್ತದೆ. ದಾಸ್ತಾನು ಮಾಡಿರುವ ಮದ್ಯ ಹಾಳಾಗಬಹುದು. ನಮಗೆ ನಷ್ಟವಾಗುತ್ತದೆ ಎಂದು ಬಾರ್ ಮತ್ತು ಹೊಟೆಲ್‌ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಮನವಿಯನ್ನು ಪರಿಗಣಿಸಿ, ಸರ್ಕಾರ ಅಬಕಾರಿ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ.

ಈ ಆದೇಶವು ಸಿಎಲ್‌–4 (ಕ್ಲಬ್‌ಗಳು), ಸಿಎಲ್–7 (ಹೊಟೆಲ್ ಮತ್ತು ಲಾಡ್ಜ್‌ಗಳು) ಮತ್ತು ಸಿಎಲ್‌–9 (ಬಾರ್) ಲೈಸೆನ್ಸ್‌ದಾರರಿಗೆ ಅನ್ವಯವಾಗುತ್ತದೆ.

ADVERTISEMENT

ಕೇವಲ ಸೀಲ್ ಮಾಡಿರುವ ಬಾಟಲಿಗಳ ಮಾರಾಟಕ್ಕೆ ಮತ್ತು ಸಿಲ್–2 (ಎಂಆರ್‌ಪಿ ಔಟ್‌ಲೆಟ್) ಲೈಸೆನ್ಸ್‌ದಾರರಿಗೆ ಮದ್ಯದ ಬಾಟಲಿಗಳನ್ನು ಪೂರೈಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು ಕಂಟೈನ್‌ಮೆಂಟ್‌ ವಲಯಗಳಿಗೆ ಅನ್ವಯಿಸುವುದಿಲ್ಲ. ಬಾರ್, ಕ್ಲಬ್ ಮತ್ತು ರೆಸ್ಟೊರೆಂಟ್‌ಗಳು ಹೊಸದಾಗಿ ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮೇ 4ರಿಂದ ಸರ್ಕಾರ ಎಂಆರ್‌ಪಿ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ರಾಜ್ಯದೆಲ್ಲೆಡೆ ಮದ್ಯದ ಅಂಗಡಿಗಳ ಎದುರು ಉದ್ದನೆಯ ಸಾಲುಗಳು ಕಂಡುಬಂದಿದ್ದವು. ಈ ಬೆಳವಣಿಗೆಯ ನಂತರ ಬಾರ್ ಮತ್ತು ರೆಸ್ಟೊರೆಂಟ್‌ಗಳ ಮಾಲೀಕರು ಮದ್ಯ ಮಾರಾಟಕ್ಕೆ ಅವಕಾಶ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ಮದ್ಯ ಮಾರಾಟ ಮುಂದುವರಿಕೆ

ಮುಂದಿನ ವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಸ್ಥಗಿತಗೊಳ್ಳಲಿದೆ ಎಂಬುದು ಕೇವಲ ಗಾಳಿಸುದ್ದಿ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೆಂಕಟ ರಾಜ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.