ADVERTISEMENT

ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಪ್ರದೇಶ: ರಾಜ್ಯದಿಂದಲೇ ಹೆಚ್ಚು ಪ್ರಸ್ತಾವ

ಅರಣ್ಯ ಸಚಿವಾಲಯದಲ್ಲಿ ರಾಜ್ಯದ 15 ಪ್ರಸ್ತಾವನೆ ಒಪ್ಪಿಗೆಗೆ ಬಾಕಿ

ಮಂಜುನಾಥ್ ಹೆಬ್ಬಾರ್‌
Published 3 ಜನವರಿ 2023, 20:30 IST
Last Updated 3 ಜನವರಿ 2023, 20:30 IST
   

ನವದೆಹಲಿ: ವಿವಿಧ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಪ್ರದೇಶದ ಬಳಕೆಗೆ ಪರಿಸರ ಅನುಮೋದನೆ (ಇ.ಸಿ.) ಕೋರಿ ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ 117 ಪ್ರಸ್ತಾವನೆಗಳು ಅನುಮೋದನೆಗೆ ಬಾಕಿ ಇವೆ. ಅದರಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಸ್ತಾವನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಒಪ್ಪಿಗೆಗಾಗಿ ಕಾದು ಕುಳಿತಿವೆ.

ಮಹದಾಯಿ ಯೋಜನೆಯ ಕಳಸಾ ನಾಲಾ ತಿರುವು ಯೋಜನೆಗೆ 33 ಹೆಕ್ಟೇರ್ ಮೀಸಲು ಅರಣ್ಯವನ್ನು ಬಳಸಿಕೊಳ್ಳಲು ಕರ್ನಾಟಕ ಸರ್ಕಾರವು ಪರಿಸರ ಸಚಿ ವಾಲಯಕ್ಕೆ 2022ರ ಡಿಸೆಂಬರ್ 30 ರಂದು ಪ್ರಸ್ತಾವನೆ ಸಲ್ಲಿಸಿದೆ. ಇದರ ಬೆನ್ನಲ್ಲೇ, ಬಾಕಿ ಇರುವ ಪ್ರಸ್ತಾವನೆಗಳ ವಿಷಯವು ಮುನ್ನೆಲೆಗೆ ಬಂದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ (ತಲಾ 15), ರಾಜಸ್ಥಾನ ಹಾಗೂ ಗುಜರಾತ್‌ (ತಲಾ 12), ಒಡಿಶಾದ 11 ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿಲ್ಲ. ಉಳಿದ ರಾಜ್ಯಗಳ ಅರ್ಜಿಗಳು ಒಂದಂಕಿಯಲ್ಲಿವೆ.

‘ಅರಣ್ಯ ಸಂರಕ್ಷಣೆ ಕಾಯ್ದೆ 1980’ರ ಅಡಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಬದ ಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತಾವನೆಗಳ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಸಚಿವಾಲಯ ಅನುಮೋದನೆ ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 1,865 ಎಕರೆ ಅರಣ್ಯ ಬಳಕೆಗೆ (48 ಪ್ರಸ್ತಾವನೆಗಳು) ಪೂರ್ವಾನುಮೋದನೆ ನೀಡಲಾ ಗಿದೆ.

ADVERTISEMENT

‘ಯೋಜನೆಗಳಿಗೆ ಅರಣ್ಯ ಬಳಸುವ ಮುನ್ನ ಸಂಬಂಧಪಟ್ಟ ಇಲಾಖೆ ಗಳು ಸಚಿವಾಲಯದ ಪರಿವೇಶ್‌ ಪೋರ್ಟ ಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ಅರಣ್ಯ ಇಲಾಖೆಯು ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ಸಚಿವಾಲಯವು ಈ ಹಿಂದೆ ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಗರಿಷ್ಠ 105 ದಿನಗಳನ್ನು
ತೆಗೆದುಕೊಳ್ಳುತ್ತಿತ್ತು. 2021ರಲ್ಲಿ ಅದನ್ನು 75 ದಿನಕ್ಕೆ ಇಳಿಸಲಾಗಿದೆ. ಈಗ 65 ದಿನಗಳಲ್ಲೇ ಒಪ್ಪಿಗೆ ನೀಡಲಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಐದು ವರ್ಷಗಳಲ್ಲಿ 92,658 ಹೆಕ್ಟೇರ್ ಅರಣ್ಯ ಬಳಕೆ: 2017–2022ರ ಅವಧಿಯಲ್ಲಿ ಪರಿಸರ ಸಚಿವಾಲಯವು 4,218 ಪ್ರಸ್ತಾವನೆಗಳಿಗೆ ಅನುಮೋದನೆ ಕೊಟ್ಟಿದೆ. 92,658 ಹೆಕ್ಟೇರ್‌ ಅರಣ್ಯ ವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡಿದೆ. ಗಣಿಗಾರಿಕೆಗೆ 18,262 ಹೆಕ್ಟೇರ್, ರಸ್ತೆಗಳ ನಿರ್ಮಾಣಕ್ಕೆ 17,836 ಹೆಕ್ಟೇರ್‌, ನೀರಾವರಿ ಯೋಜನೆಗಳಿಗೆ 16,622 ಹೆಕ್ಟೇರ್ ಅರಣ್ಯವನ್ನು ಬಳಸಲಾಗಿದೆ.

‘ಕಾಂಪಾ’ ಯೋಜನೆಯಡಿ ಕರ್ನಾಟಕದಲ್ಲಿ 2017–18ರಲ್ಲಿ 3,521 ಹೆಕ್ಟೇರ್‌, 18–19ರಲ್ಲಿ 2,465 ಹೆಕ್ಟೇರ್, 19–20ರಲ್ಲಿ 1,370 ಹೆಕ್ಟೇರ್‌, 20–21ರಲ್ಲಿ 15,780 ಹೆಕ್ಟೇರ್ ಹಾಗೂ 2021–22ರಲ್ಲಿ 9,845 ಹೆಕ್ಟೇರ್‌ ಅರಣ್ಯೀಕರಣ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.