ADVERTISEMENT

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:53 IST
Last Updated 26 ಜನವರಿ 2026, 15:53 IST
ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದರು
ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದರು   

ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಆ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಶಾಸಕ ಕೆ.ಎನ್. ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋದರ ಸಂಬಂಧಿ, ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಕಣ್ಣಿಟ್ಟಿದ್ದಾರೆ.

ಬ್ಯಾಂಕಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸೋಮವಾರ ಸಂಜೆ ಚಹಾ ಕೂಟ ಏರ್ಪಡಿಸಿದ್ದರು. ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆ ನಡೆದಿದೆ. ರಾಜಣ್ಣ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗುವ ಸಾಧ್ಯತೆಯಿದೆ. 

29ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದು, 12.30ಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 21 ನಿರ್ದೇಶಕರ ಪೈಕಿ, ಮೈಸೂರು–ಚಾಮರಾಜನಗರ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ 18 ‌ಡಿಸಿಸಿ ‌ಬ್ಯಾಂಕುಗಳು‌ ನಾಮನಿರ್ದೇಶಿತರನ್ನು ಈಗಾಗಲೇ ನಿಯೋಜಿಸಿವೆ.

ADVERTISEMENT

18 ನಿರ್ದೇಶಕರಲ್ಲಿ 15 ಮಂದಿ ಕಾಂಗ್ರೆಸ್‌ ಬೆಂಬಲಿಗರಾಗಿದ್ದು, ಇಬ್ಬರು ಬಿಜೆಪಿ (ಕೊಡಗು– ಕೊಡಂದೇರ ಪಿ. ಗಣಪತಿ ಮತ್ತು ಚಿಕ್ಕಮಗಳೂರು– ಬೆಳ್ಳಿಪ್ರಕಾಶ್) ಮತ್ತು ಒಬ್ಬ ಜೆಡಿಎಸ್‌ (ಹಾಸನ– ಆರ್‌. ಸೂರಜ್‌) ಬೆಂಬಲಿತರಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ರಾಜಣ್ಣ ಅವರು ಸಹಕಾರಿ ಕ್ಷೇತ್ರದ ಮೇಲೆ ತಮ್ಮ ಹಿಡಿತ ಮುಂದುವರಿಸಿದ್ದು, ಈಗ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಅವರು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2001ರ ಅಕ್ಟೋಬರ್‌ನಿಂದ 2005ರ ಏಪ್ರಿಲ್ ಮತ್ತು 2015ರ ಆಗಸ್ಟ್‌ನಿಂದ 2020ರ ಸೆಪ್ಟೆಂಬರ್‌ವರೆಗೆ ಅಧ್ಯಕ್ಷರಾಗಿದ್ದರು. ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್‌ ನಿರ್ದೇಶಕರಾಗಿರುವ ಎಸ್‌. ರವಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ರವಿ ಅವರನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಎರಡು ಬಾರಿ ಬೆಂಗಳೂರಿನಲ್ಲಿ ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.