ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಗದ್ದಲ ನಡೆಸಿ ಸಭಾಧ್ಯಕ್ಷರ ಮುಖದ ಮೇಲೆ ಕಾಗದದ ಚೂರುಗಳನ್ನು ಎಸೆದರು
ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ‘ಮಧುಬಲೆ’ಗೆ (ಹನಿ ಟ್ರ್ಯಾಪ್) ಸಿಲುಕಿಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಗದ್ದಲ ನಡೆಸಿ, ಸಭಾಧ್ಯಕ್ಷರ ಪೀಠದವರೆಗೂ ನುಗ್ಗಿ ಹೋಗಿ, ಅವರ ಮುಖದ ಮೇಲೆ ಕಾಗದದ ಚೂರುಗಳನ್ನು ಎಸೆದ ಬಿಜೆಪಿಯ 18 ಶಾಸಕರನ್ನು ಆರು ತಿಂಗಳು ಸದನದಿಂದ ಅಮಾನತು ಮಾಡಲಾಗಿದೆ.
ವಿಧಾನಮಂಡಲದ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ತೀವ್ರ ಗದ್ದಲದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ಐದು ಗಂಟೆ ಕಲಾಪದ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸಂಜೆ 4.10ಕ್ಕೆ ಪುನಃ ಕಲಾಪ ಆರಂಭಿಸಿದ ಅವರು, ‘18 ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ’ ಎಂದು ಪ್ರಕಟಿಸಿದರು.
ಸಭಾಧ್ಯಕ್ಷರು ಹೆಸರಿಸಿರುವ ಶಾಸಕರನ್ನು ಆರು ತಿಂಗಳಿಗೆ ಸದನದಿಂದ ಅಮಾನತುಗೊಳಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ನಿರ್ಣಯ ಮಂಡಿಸಿದರು. ಅದನ್ನು ಸ್ಪೀಕರ್ ಧ್ವನಿಮತಕ್ಕೆ ಹಾಕಿದರು. ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ, ‘18 ಶಾಸಕರನ್ನು ಆರು ತಿಂಗಳಿಗೆ ಸದನದಿಂದ ಅಮಾನತು ಮಾಡಲಾಗಿದೆ’ ಎಂದು ಖಾದರ್ ಪ್ರಕಟಿಸಿದರು.
‘ಅಮಾನತುಗೊಂಡಿರುವ ಎಲ್ಲ ಶಾಸಕರು ಸ್ವಯಂ ಪ್ರೇರಿತವಾಗಿ ಸದನ ದಿಂದ ಹೊರ ಹೋಗಬೇಕು’ ಎಂದು ಮನವಿ ಮಾಡಿದ ಸಭಾಧ್ಯಕ್ಷರು ಹತ್ತು ನಿಮಿಷ ಕಲಾಪ ಮುಂದೂಡಿದರು. ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಾತ್ರ ಸದನದಿಂದ ಹೊರ ನಡೆದರು. 17 ಶಾಸಕರು ಸದನದಲ್ಲೇ ಉಳಿದರು. ಆಗ ಮಾರ್ಷಲ್‌ಗಳು ಅಮಾನತುಗೊಂಡ ಶಾಸಕರನ್ನು ಹೊತ್ತೊಯ್ದು ಸದನದಿಂದ ಹೊರ ಹಾಕಿದರು.
ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭ ವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು, ‘ಹನಿ ಟ್ರ್ಯಾಪ್’ ಆರೋಪದ ಕುರಿತು ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಸಿ.ಡಿ ಹಿಡಿದು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು.
ಗದ್ದಲದ ಮಧ್ಯೆಯೇ ಮುಖ್ಯಮಂತ್ರಿ ಉತ್ತರ ಮುಂದುವರಿಸಿದರು. ಉತ್ತರ ಮುಗಿಯುತ್ತಾ ಬರುತ್ತಿದ್ದಂತೆಯೇ ಧರಣಿ ನಿರತ ಬಿಜೆಪಿ ಸದಸ್ಯರು ಕಾಗದ ಪತ್ರ ಗಳನ್ನು ಹರಿದು ಚೂರು ಚೂರು ಮಾಡಿ ಸಭಾಧ್ಯಕ್ಷರ ಪೀಠದತ್ತ ತೂರಿದರು. ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠದ ಬಳಿ ಹೋಗಿ ಘೋಷಣೆ ಕೂಗ ಲಾರಂಭಿಸಿದರು. ಸಭಾಧ್ಯಕ್ಷರ ರಕ್ಷಣೆಗೆ ಧಾವಿಸಿದ ಮಾರ್ಷಲ್‌ಗಳು, ಬಿಜೆಪಿ ಸದಸ್ಯರು ಮೇಲೆರದಂತೆ ತಡೆದರು. ‘ಮೇಲೆ ಬಿಡಿ ಪರವಾಗಿಲ್ಲ’ ಎಂದು ಪೀಠದಲ್ಲಿದ್ದ ಖಾದರ್ ಹೇಳುತ್ತಿದ್ದಂತೆ ಬಿಜೆಪಿಯ ಹಲವು ಸದಸ್ಯರು ಪೀಠದ ಬಳಿ ಹೋದರು.
ಮುಖ್ಯಮಂತ್ರಿಯವರ ಉತ್ತರ ಮುಗಿ ಯುತ್ತಿದ್ದಂತೆಯೇ ಸಭಾಧ್ಯಕ್ಷರು ಮಸೂದೆ ಗಳ ಪರ್ಯಾಲೋಚನೆ ಕೈಗೆತ್ತಿಕೊಂಡರು. ಬಿಜೆಪಿ ಸದಸ್ಯರು ಪೀಠದ ಸುತ್ತ ನಿಂತು ಗದ್ದಲ ನಡೆಸುತ್ತಿರುವುದನ್ನು ಕಂಡು ಕೆಂಡಾಮಂಡಲರಾದ ಸಿದ್ದರಾಮಯ್ಯ, ‘ಯಾರ‍್ರೀ ಸೆಕ್ಯೂರಿಟಿ? ಅವರನ್ನೆಲ್ಲ ಎತ್ತಿ ಆಚೆಗೆ ಹಾಕಿ’ ಎಂದು ಗುಡುಗಿದರು. ಆಗ ಮಾರ್ಷಲ್‌ಗಳು ಬಿಜೆಪಿ ಸದಸ್ಯರನ್ನು ಅಲ್ಲಿಂದ ಬಲವಂತವಾಗಿ ಕೆಳಕ್ಕೆ ಇಳಿಸಿ ದರು. ಆಗ ತಳ್ಳಾಟ– ನೂಕಾಟ ನಡೆಯಿತು. ಕೆಲ ಶಾಸಕರು ಸಭಾಧ್ಯಕ್ಷರ ಪೀಠದ ಹಿಂದಿನ ಬಾಗಿಲಿನಿಂದ ಬರಲು ಪ್ರಯತ್ನಿಸಿದಾಗ ಆ ಬಾಗಿಲುಗಳನ್ನೂ ಮುಚ್ಚಿ ಭದ್ರಪಡಿಸಿದರು.
ಬಿಜೆಪಿ ಶಾಸಕರನ್ನು ಪೀಠದ ಸುತ್ತಲಿನ ಆವರಣದಿಂದ ಇಳಿಸಿದ ಬಳಿಕ ಸಭಾಧ್ಯಕ್ಷರ ರಕ್ಷಣೆಗೆಂದು ಮುಖ್ಯ ಸಚೇತಕ ಅಶೋಕ ಪಟ್ಟಣ ಬಂದು ನಿಂತರು. ಜತೆಗೆ ಮಾರ್ಷಲ್‌ಗಳೂ ಇದ್ದರು. ಕೆಳಗಿನಿಂದ ಸಭಾಧ್ಯಕ್ಷರತ್ತ ಕಾಗದ ಪತ್ರಗಳನ್ನು ತೂರಿದರು. ಕೆಲವು ಅವರ ಮುಖದ ಮೇಲೂ ಬಿದ್ದವು. ಮತ್ತೊಂದು ಕಡೆ ಆಡಳಿತ ಪಕ್ಷ ಸದಸ್ಯರು ಮೊದಲ ಸಾಲಿನತ್ತ ಧಾವಿಸಿ, ಸಿದ್ದರಾಮಯ್ಯ ಸುತ್ತ ಕೋಟೆ ಕಟ್ಟಿ ನಿಂತರಲ್ಲದೇ ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತ, ಅವರ ಮೇಲೂ ಕಾಗದಗಳನ್ನು ಎಸೆಯಲಾರಂಭಿಸಿದರು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳದಷ್ಟು ಗದ್ದಲ ಉಂಟಾಗಿತ್ತು. ಆಡಳಿತ ಮತ್ತು ವಿಪಕ್ಷದ ಸದಸ್ಯರು ವಾಗ್ವಾದದಲ್ಲಿ ತೊಡಗಿದ್ದರು. ಕೆಲವು ಮಸೂದೆಗಳು ಅಂಗೀಕಾರವಾಗುತ್ತಿ ದ್ದಂತೆಯೇ ಸಭಾಧ್ಯಕ್ಷರು ಕಲಾಪನ್ನು ಮುಂದೂಡಿದರು.
18 ಸದಸ್ಯರನ್ನು ಹೊರಹಾಕಿದ ಬಳಿಕ ಕಲಾಪ ಮತ್ತೆ ಆರಂಭವಾಯಿತು. ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಗದ್ದಲದ ಮಧ್ಯೆಯೇ ಎರಡು ಮಸೂದೆಗಳನ್ನು ಅಂಗೀಕರಿಸಲಾಯಿತು. ಆಗಲೂ ಕೆಲವು ಸದಸ್ಯರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದರು. ಮೇಲೇರಲು ಯತ್ನಿಸಿದ ಕೆಲವರನ್ನು ಮಾರ್ಷಲ್‌ಗಳು ತಡೆದರು. ಗಲಾಟೆಯ ಮಧ್ಯೆಯೇ ಸ್ಪೀಕರ್, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಆರು ತಿಂಗಳೊಳಗೆ ಅಂದರೆ, ಜುಲೈನಲ್ಲಿ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ
ಅಮಾನತುಗೊಂಡ ಸದಸ್ಯರು ವಿಧಾನಸಭೆಯ ಸಭಾಂಗಣ, ಮೊಗಸಾಲೆ, ಗ್ಯಾಲರಿ ಪ್ರವೇಶಿಸುವಂತಿಲ್ಲ
ವಿಧಾನಮಂಡಲ/ ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ
ವಿಧಾನಸಭೆಯ ಕಲಾಪ ಪಟ್ಟಿಯಲ್ಲಿ ಅವರ ಹೆಸರಿನಲ್ಲಿ ಯಾವುದೇ ವಿಷಯ ನಮೂದಿಸುವಂತಿಲ್ಲ
ಅಮಾನತಿನ ಅವಧಿಯಲ್ಲಿ ಈ ಸದಸ್ಯರು ನೀಡುವ ಸೂಚನಾ ಪತ್ರಗಳನ್ನು ಸ್ವೀಕರಿಸುವುದಿಲ್ಲ
ಸಮಿತಿಗಳ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶವಿಲ್ಲ
ಅಮಾನತಿನ ಅವಧಿಯಲ್ಲಿ ಯಾವುದೇ ದಿನಭತ್ಯೆ ಪಡೆಯಲು ಅರ್ಹರಿರುವುದಿಲ್ಲ
‘ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸುವಂತೆ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಚೀಟಿ ಕಳಿಸಿದ ಸಚಿವರು ಯಾರು ಎಂಬುದು ತನಿಖೆ ಆಗಲಿ. ಕಾಂಗ್ರೆಸ್‌ನಲ್ಲಿ ಏನು ನಡೀತಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಬಿಜೆಪಿಯ ಬಿ. ಸುರೇಶ್‌ಗೌಡ ಹೇಳಿದರು.
ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ‘ನಿನ್ನೆ ರಾಜಣ್ಣ ಅವರು ಸದನದ ಒಳಗೆ ಬರುವುದಕ್ಕೂ ಮೊದಲು ನಿಮ್ಮ ಬಳಿ (ಸಿದ್ದರಾಮಯ್ಯ) ಬಂದು ಈ ವಿಷಯ ಪ್ರಸ್ತಾಪಿಸಿದ್ದಾರೆ. ಅದೇ ರೀತಿ, ಗೃಹ ಸಚಿವರೂ ನಿಮ್ಮ ಬಳಿ ಬಂದಿದ್ದರು ಎಂಬ ಮಾಹಿತಿ ಇದೆ. ನಿಜವೇ’ ಎಂದು ಕೇಳಿದರು.
ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರಿಬ್ಬರು ಬಂದಿದ್ದು ನಿಜ. ನಿನ್ನೆ (ಗುರುವಾರ) ಈ ವಿಷಯ ಹೇಳಿಲ್ಲ. ಅದಕ್ಕೆ ಮೊದಲೇ ಹೇಳಿದ್ದರು’ ಎಂದರು. ‘ಹಾಗಿದ್ದರೆ ನಿಮಗೆ ಈ ಎಲ್ಲ ವಿಷಯಗಳೂ ಗೊತ್ತು’ ಎಂದು ಅಶೋಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.