ADVERTISEMENT

ಎಮ್ಮೆ, ಕುರಿ ಮರಿ ಹಾಕಿದರೂ ನಮ್ಮದೆನ್ನುವ ಸಿದ್ದರಾಮಯ್ಯ: ಪ್ರಲ್ಹಾದ ಜೋಶಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:45 IST
Last Updated 9 ಮಾರ್ಚ್ 2023, 19:45 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹಾಸನ: ‘ಎಲ್ಲವೂ ನಮ್ಮದೇ ಎನ್ನುವುದು ಸಿದ್ದರಾಮಯ್ಯ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಎಮ್ಮೆ, ಕುರಿ ಒಳ್ಳೇ ಮರಿ ಹಾಕಿದರೂ ನಮ್ಮದೇ ಎನ್ನುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುರುವಾರ ಲೇವಡಿ ಮಾಡಿದರು.

ಜಾವಗಲ್‌ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು, ಮೈಸೂರು–ಬೆಂಗಳೂರು ದಶಪಥ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿದಂತೆ ₹ 10 ಸಾವಿರ ಕೋಟಿ ಅನುದಾನ ಒದಗಿಸಿದೆ. ಸಿದ್ದರಾಮಯ್ಯನವರೇ ಆ ಕೆಲಸ ಮಾಡಿದ್ದರೆ ಅಭ್ಯಂತರವಿರಲಿಲ್ಲ. ಅವರು ಮಾಡದೇ ಇದ್ದುದರಿಂದ ನಾವು ಮಾಡಬೇಕಾಗಿದೆ’ ಎಂದರು.

ಮಹಾರಾಜರಿಗೆ ಸಲ್ಲಬೇಕು– ಎಚ್‌ಡಿಕೆ
ಈ ಕುರಿತು ಅರಸೀಕೆರೆ ತಾಲ್ಲೂಕಿನ ಕರಗುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಈ ಹೆದ್ದಾರಿ ನಿರ್ಮಾಣದ ಹೆಗ್ಗಳಿಕೆ ಮೈಸೂರು ಮಹಾರಾಜರಿಗೆ ಸಲ್ಲಬೇಕು. ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಊಟಿ–ಬೆಂಗಳೂರು ನಡುವೆ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಿತ್ತು’ ಎಂದು ಹೇಳಿದರು.

ADVERTISEMENT

‘ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಎಚ್‌.ಡಿ.ದೇವೇಗೌಡರು ಲೋಕೋಪಯೋಗಿ ಸಚಿವರಿದ್ದಾಗ ಆ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಿದ್ದರು. ರಾಮಕೃಷ್ಣ ಹೆಗಡೆ ಒಪ್ಪಿಗೆ ನೀಡಲಿಲ್ಲ. 2018 ರಲ್ಲಿ ನಾನು ಮುಖ್ಯಮಂತ್ರಿ ಹಾಗೂ ಎಚ್‌.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಭೂಸ್ವಾಧೀನ, ಅರಣ್ಯ, ಇಂಧನ ಇಲಾಖೆಯಿಂದ ಅನುಮತಿ ಕೊಡಿಸಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.