ADVERTISEMENT

ವಿಧಾನಸಭೆ ಚುನಾವಣೆ: ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2023, 5:32 IST
Last Updated 6 ಏಪ್ರಿಲ್ 2023, 5:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್‌ ಇಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ‘ಕೈ’ ಪಡೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ. ಉಳಿದ 99 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಚುನಾವಣಾ ಸಮಿತಿಯು ಮಂಗಳವಾರ ಹಾಗೂ ಬುಧವಾರ ಭಾರಿ ಕಸರತ್ತು ನಡೆಸಿತ್ತು.

ಸಂಸದ ಮೋಹನ್‌ ಪ್ರಕಾಶ್‌ ನೇತೃತ್ವದ ಪಕ್ಷದ ಸ್ಕ್ರೀನಿಂಗ್‌ ಸಮಿತಿಯು ಮಂಗಳವಾರ ಸಂಜೆ ಹಾಗೂ ಬುಧವಾರ ಬೆಳಿಗ್ಗೆ ಸಭೆ ನಡೆಸಿ 99 ಕ್ಷೇತ್ರಗಳಿಗೆ ಸಂಭಾವ್ಯರ ಹೆಸರನ್ನು ಅಂತಿಮಗೊಳಿಸಿದೆ.

ADVERTISEMENT

ಕೆಲವು ಕ್ಷೇತ್ರಗಳಿಗೆ ತಲಾ ಇಬ್ಬರು ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡಿತು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣಾ ಸಮಿತಿಯು ಬುಧವಾರ ಸಂಜೆ ಸಭೆ ಸೇರಿ 57 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತು. ತುರ್ತು ಕೆಲಸದ ನಿಮಿತ್ತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಭೆಯಿಂದ ಬೇಗನೆ ನಿರ್ಗಮಿಸಿದರು. ಹೀಗಾಗಿ, ಉಳಿದ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿಲ್ಲ.

ರಾಹುಲ್‌ ಗಾಂಧಿ ಅವರ ಕೋಲಾರ ಭೇಟಿಯ ಬಳಿಕ ಮೂರನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.