ಕಲಾಪಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ ಅಮಾನತುಗೊಂಡಿರುವ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರಗಡೆ ಹಾಕಿದರು
ಬೆಂಗಳೂರು: ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮಾನತುಗೊಂಡಿರುವ ಬಿಜೆಪಿಯ 18 ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರಹಾಕಿದರು.
ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ಆರೋಪನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಕಲಾಪ ನಡೆಸಲು ಅವಕಾಶ ಕೊಡಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮನವಿ ಮಾಡಿಕೊಂಡರೂ ಪಟ್ಟು ಬಿಡಲಿಲ್ಲ.
ಒಂದು ಹಂತದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿದರು. ಸ್ಪೀಕರ್ ಪೀಠದತ್ತ ಕಾಗದಪತ್ರಗಳನ್ನು ಎಸೆದರು. ಗದ್ದಲ ಹೆಚ್ಚಾದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಮಧ್ಯಾಹ್ನ ಕಲಾಪ ಆರಂಭವಾದ ನಂತರ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ಗದ್ದಲ ನಡೆಸಿದ ಸದಸ್ಯರನ್ನು ಅಮಾನತು ಮಾಡುವಂತೆ ಪ್ರಸ್ತಾವನೆ ಮಂಡಿಸಿದರು. ಸಭಾಧ್ಯಕ್ಷರು 18 ಸದಸ್ಯರ ಹೆಸರು ಹೇಳಿ ಅಮಾನತು ಮಾಡಿದರು.
ಅಮಾನತುಗೊಂಡ ಎಲ್ಲ ಸದಸ್ಯರಿಗೆ ಸ್ವಯಂಪ್ರೇರಿತವಾಗಿ ಸದನದಿಂದ ಹೊರ ಹೋಗುವಂತೆ ಮನವಿ ಮಾಡಿದ್ದ ಸಭಾಧ್ಯಕ್ಷರು, ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ್ದಾರೆ. ಆದರೆ, ಅಮಾನತಾದವರು ಸ್ವಯಂಪ್ರೇರಿತವಾಗಿ ಹೊರ ಹೋಗದ ಕಾರಣ, ಮಾರ್ಷಲ್‌ಗಳೇ ಅವರನ್ನು ಹೊತ್ತುಕೊಂಡು ಬಂದು ಸದನದಿಂದ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.