ADVERTISEMENT

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಂಥೆಟಿಕ್‌ ಡ್ರಗ್ಸ್‌: ಬಸವರಾಜ ಬೊಮ್ಮಾಯಿ

ಮಾದಕ ವಸ್ತು ವಿರುದ್ಧ ಯುದ್ಧ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 20:48 IST
Last Updated 10 ಮಾರ್ಚ್ 2020, 20:48 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಸಿಂಥೆಟಿಕ್ ಡ್ರಗ್ಸ್‌ಗಳನ್ನು ಚಾಕೊಲೇಟ್‌, ಬಿಸ್ಕತ್‌ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೂರೈಕೆ ಮಾಡುವುದು ಕೂಡ ಪತ್ತೆಯಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾದಕ ವಸ್ತು ಕೇವಲ ಸರ್ವಜ್ಞನಗರ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದು ದೇಶ, ಅಂತರರಾಷ್ಟ್ರೀಯ ಮಟ್ಟದ ಸಮಸ್ಯೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ. ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರ ಯುದ್ಧ ಘೋಷಣೆ ಮಾಡಿದ್ದು, ಇವುಗಳ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ’ ಎಂದರು.

‘ಇತ್ತೀಚೆಗೆ ಇಂಟರ್‌ನೆಟ್ ಮೂಲಕವೂ ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ. ಟಿಒಆರ್ ಎಂಬ ಸರ್ಚ್ ಎಂಜಿನ್‌ ಎಂಬ ಡಾರ್ಕ್‌ ವೆಬ್‌ಗಳ ಮೂಲಕವೂ ತರಿಸಲಾಗುತ್ತಿದೆ. ಈ ವೆಬ್‌ಗಳನ್ನು ಅಕ್ರಮ ವ್ಯವಹಾರಗಳಿಗೆ ಬಳಸಲಾಗುತ್ತದೆ. ಈ ವೆಬ್‌ಗಳನ್ನು ಡ್ರಗ್ಸ್, ಶಸ್ತ್ರಾಸ್ತ್ರ, ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿದೆ. ಇದನ್ನು ಪೊಲೀಸ್ ಇಲಾಖೆ ಭೇದಿಸಿದೆ’ ಎಂದರು.

ADVERTISEMENT

‘ಸ್ಪೀಡ್‌ ಪೋಸ್ಟ್‌ ಮೂಲಕವೂ ಡ್ರಗ್ಸ್ ಬರುತ್ತಿದೆ. ಇತ್ತೀಚೆಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಅಂಚೆ ಇಲಾಖೆಯ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ 2019ರಲ್ಲಿ 1,652 ಮಾದಕ ವಸ್ತು ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 600 ಪ್ರಕರಣಗಳು ಹೆಚ್ಚಾಗಿವೆ’ ಎಂದರು.

ಕೆ.ಜೆ.ಜಾರ್ಜ್‌, ‘ಇಂತಹ ಪಿಡುಗಿನ ಮೂಲ ಪತ್ತೆ ಹಚ್ಚಲು ಬದ್ಧತೆಯುಳ್ಳ ಅಧಿಕಾರಿಗಳನ್ನು ನೇಮಿಸಬೇಕು. ಗುಪ್ತಚರ ವಿಭಾಗವನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಬಸವರಾಜ ಬೊಮ್ಮಾಯಿ, ‘ಈ ವರ್ಷ 8 ಸೆನ್‌ ಠಾಣೆಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳು ಮಾದಕ ವಸ್ತುಗಳು, ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಠಾಣೆಗಳನ್ನು ತೆರೆಯಲಾಗಿದೆ’ ಎಂದರು.

‘ಸರ್ವಜ್ಞನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ 2017ರಿಂದ 2020ರ ವರೆಗೆ 116 ಪ್ರಕರಣಗಳನ್ನು ದಾಖಲಿಸಲಾಗಿದ್ದು, 289 ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ 49 ವಿದೇಶಿಯರು ಸೇರಿದ್ದಾರೆ. ಆದರೆ, ಯಾವುದೇ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ’ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.