ADVERTISEMENT

ಪೇಚಿಗೆ ಸಿಲುಕಿದ ಅಬಕಾರಿ ಸಚಿವ ಎಚ್‌.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 20:51 IST
Last Updated 10 ಮಾರ್ಚ್ 2020, 20:51 IST
ಎಚ್‌. ನಾಗೇಶ್
ಎಚ್‌. ನಾಗೇಶ್   

ಬೆಂಗಳೂರು: ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡುವ ಸಂಬಂಧ ಸಮರ್ಪಕ ಉತ್ತರ ನೀಡಲಾರದೆ ಅಬಕಾರಿ ಸಚಿವ ಎಚ್‌.ನಾಗೇಶ್‌ ಪೇಚಿಗೆ ಸಿಲುಕಿದ ವಿದ್ಯಮಾನಕ್ಕೆ ವಿಧಾನಸಭೆ ಮಂಗಳವಾರ ಸಾಕ್ಷಿಯಾಯಿತು.

ಶೂನ್ಯವೇಳೆಯಲ್ಲಿ ಬಿಜೆಪಿಯ ದತ್ತಾತ್ರೇಯ ಸಿ.ಪಾಟೀಲ ರೇವೂರ ಪ್ರಶ್ನೆ ಕೇಳಿದರು. ಕಲಬುರ್ಗಿ ಜಿಲ್ಲೆಯಲ್ಲಿ ಅಕ್ರಮ ಮದ್ಯದಂಗಡಿಗಳು ಇಲ್ಲ ಎಂದು ಸಚಿವರು ಉತ್ತರಿಸಿದರು. ‘ಶಾಲಾ ಕಾಲೇಜುಗಳ ಪಕ್ಕದಲ್ಲೇ ಮದ್ಯದಂಗಡಿಗಳು ಇವೆ. ಬೆಳಿಗ್ಗೆ 8ರಿಂದ ರಾತ್ರಿ 12ರ ವರೆಗೆ ಕಾರ್ಯನಿರ್ವಹಿಸುತ್ತಿವೆ’ ಎಂದು ರೇವೂರ ಗಮನ ಸೆಳೆದರು. ಅದಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ತುಕಾರಾಮ್‌, ಭೀಮಾ ನಾಯ್ಕ್‌ ಮತ್ತಿತರರು ಧ್ವನಿಗೂಡಿಸಿ, ‘ಸಚಿವರು ತಪ್ಪು ಉತ್ತರ ನೀಡಿದ್ದಾರೆ. ಉತ್ತರ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು. ‘ಅನಧಿಕೃತ ಅಂಗಡಿಗಳು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ನಾಗೇಶ್‌ ಪ್ರತಿಕ್ರಿಯಿಸಿದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮದ್ಯ ಮಾರಾಟ ಹೆಚ್ಚಳ ಮಾಡಬೇಕು ಎಂದು ಗುರಿ ನಿಗದಿಪಡಿಸಿರುವುದರಿಂದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ. ಮದ್ಯದಂಗಡಿ ವಿರುದ್ಧ ಸಮಾಜದಲ್ಲಿ ದೊಡ್ಡ ಅಸಮಾಧಾನವಿದೆ. ಮಹಿಳಾ ಸಂಘಗಳು ಧ್ವನಿ ಎತ್ತಿವೆ. ಅಸಮಾಧಾನ ದೊಡ್ಡ ಮಟ್ಟದಲ್ಲಿ ಸ್ಫೋಟವಾಗುವ ಮೊದಲು ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ನಿರ್ದಿಷ್ಟ ಮದ್ಯ ಮಾರಾಟ ಮಾಡುವಂತೆ ಕೆಲವು ಅಧಿಕಾರಿಗಳು ಗುರಿ ನಿಗದಿಪಡಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು’ ಎಂದು ಹಲವು ಸದಸ್ಯರು ಆಗ್ರಹಿಸಿದರು. ಆಗ ಅಬಕಾರಿ ಸಚಿವರ ನೆರವಿಗೆ ಧಾವಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಅನಧಿಕೃತವಾಗಿ ಮದ್ಯದಂಗಡಿ ತೆರೆದಿದ್ದರೆ ಅವುಗಳನ್ನು ಮುಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.