ADVERTISEMENT

ವಿಧಾನ ಪರಿಷತ್‌: ಸರ್ಕಾರಕ್ಕೆ ಧಿಕ್ಕಾರ ಕೂಗಿ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 16:23 IST
Last Updated 23 ಫೆಬ್ರುವರಿ 2024, 16:23 IST
<div class="paragraphs"><p>ವಿಧಾನ ಪರಿಷತ್‌</p></div>

ವಿಧಾನ ಪರಿಷತ್‌

   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯದಿಂದ ಪ್ರೌಢಶಾಲಾ ಸಹ ಶಿಕ್ಷಕರನ್ನು ಹೊರಗಿಟ್ಟಿರುವ ಶಿಕ್ಷಣ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮತ್ತು ಜೆಡಿಎಸ್‌ನ ಮರಿತಿಬ್ಬೇಗೌಡ, ಸರ್ಕಾರಕ್ಕೆ ಧಿಕ್ಕಾರ ಕೂಗಿ ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ನಡೆಯಿತು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಈ ಇಬ್ಬರು ಮತ್ತು ಬಿಜೆಪಿಯ ಅ. ದೇವೇಗೌಡ, ಎಂ. ಚಿದಾನಂದಗೌಡ, ‘ಇಲಾಖೆಯ ಈ ನಡೆಯಿಂದ ಪ್ರೌಢ ಶಾಲಾ ಶಿಕ್ಷಕರಿಗೆ ಅವಮಾನ ಆಗಿದೆ. ಅವರ ಮೇಲೆ ಅನುಮಾನ ಪಡುವಂತಾಗಿದೆ’ ಎಂದರು.

ADVERTISEMENT

‘ಪಾಠ ಮಾಡಲು ಮತ್ತು ಮೌಲ್ಯಮಾಪನಕ್ಕೆ ಪ್ರೌಢ ಸಹ ಶಾಲಾ ಶಿಕ್ಷಕರನ್ನು ಬಳಸಿಕೊಂಡು, ಪರೀಕ್ಷಾ ಕಾರ್ಯದಿಂದ ಹೊರಗಿಡುವುದು ಎಷ್ಟು ಸರಿ. ಅವರು ಏನು ತಪ್ಪು ಮಾಡಿದ್ದಾರೆ? ಹೊರಗಿಡಲು ಕಾರಣವೇನು’ ಎಂದು ಪ್ರಶ್ನಿಸಿದರು. ಬಿಜೆಪಿ ಎಸ್.ವಿ. ಸಂಕನೂರು ಮತ್ತು ಕಾಂಗ್ರೆಸ್‌ನ ಪುಟ್ಟಣ್ಣ ಕೂಡಾ ದನಿಗೂಡಿಸಿದರು.

‌ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ಒತ್ತಡ ರಹಿತ‌, ಫಲಿತಾಂಶ ಉನ್ನತೀಕರಿಸಲು ಇಲಾಖೆಯ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ಈ‌ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿಕ್ಷಕರನ್ನು ಅವಮಾನಿಸುವ ಉದ್ದೇಶ ನಮಗಿಲ್ಲ’ ಎಂದರು.

ಸಚಿವರ ಉತ್ತರಕ್ಕೆ ಕೆರಳಿದ ವೈ.ಎ. ನಾರಾಯಣಸ್ವಾಮಿ ಮತ್ತು ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸುತ್ತಲೇ ಸಭಾಪತಿ ಪೀಠದ ಎದುರು ಪ್ರತಿಭಟನೆ ನಡೆಸಿದರು. ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ‘ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾವದಲ್ಲಿ ಚರ್ಚೆಗೆ ಅವಕಾಶ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.