ADVERTISEMENT

ಸಾಹಿತಿ ಎಸ್.ಎಲ್. ಭೈರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 3:30 IST
Last Updated 5 ಮಾರ್ಚ್ 2021, 3:30 IST

ಬೆಂಗಳೂರು: ತಿಗಳ ಸಮುದಾಯದ ಆರಾಧ್ಯದೇವತೆ ದ್ರೌಪದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಾಹಿತಿ ಎಸ್.ಎಲ್. ಭೈರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಸದಸ್ಯ ಪಿ.ಆರ್. ರಮೇಶ್‌ ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಪೌರಾಣಿಕ ಹಿನ್ನೆಲೆ ಹೊಂದಿರುವ ದ್ರೌಪದಿ ಬಗ್ಗೆ ಅಪಹಾಸ್ಯ ಮಾಡುವ ಮೂಲಕ ತಿಗಳ ವಹ್ನಿಕುಲ ಸಮುದಾಯ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 205, 298, 505ರ ಅಡಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಸಮುದಾಯಕ್ಕೂ ಅದರದೇ ಆದ ಪುರಾಣ ಮತ್ತು ಐತಿಹಾಸಿಕ ನಂಟು ಇರುತ್ತದೆ. ಆ ನಂಬಿಕೆಗಳ ಮೇಲೆ ಆಯಾ ಸಮುದಾಯದ ಧಾರ್ಮಿಕ ಭಾವನೆ, ಸಂಪ್ರದಾಯ, ಆಚರಣೆಗಳಿರುತ್ತವೆ. ಒಂದು ಸಮುದಾಯದ ಸಂಪ್ರದಾಯದ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಭೈರಪ್ಪ ಅವರ ಹೇಳಿಕೆ ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಅವರು ಉಲ್ಲೇಖಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡಿಸುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.