ADVERTISEMENT

ಕ್ಷೇತ್ರ ಪುನರ್‌ವಿಂಗಡಣೆ ಅವೈಜ್ಞಾನಿಕ: ಶಾಸಕರ ಆಕ್ಷೇಪ

ಮೀಸಲಾತಿ ನಿಗದಿಯಲ್ಲೂ ಗೊಂದಲ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 18:25 IST
Last Updated 22 ಮಾರ್ಚ್ 2021, 18:25 IST
ವಿಧಾನ ಸೌಧ
ವಿಧಾನ ಸೌಧ   

ಬೆಂಗಳೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಅವೈಜ್ಞಾನಿಕವಾಗಿದೆ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ.ಸುನಿಲ್‌ ಕುಮಾರ್‌, ‘ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಕೆಲವು ಕಡೆಗಳಲ್ಲಿ ಕ್ಷೇತ್ರಗಳು ಕಡಿಮೆ ಆಗುತ್ತವೆ. ಮಲೆನಾಡಿನಲ್ಲಿ ಮತ್ತಷ್ಟು ಸಮಸ್ಯೆ ಆಗುತ್ತಿದೆ’ ಎಂದು ಗಮನ ಸೆಳೆದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಕೆಲವು ಕಡೆಗಳಲ್ಲಿ ಕ್ಷೇತ್ರಗಳ ಸಂಖ್ಯೆ 13ರಿಂದ 11ಕ್ಕೆ ಇಳಿದಿದೆ. ಭೌಗೋಳಿಕೆ ವಿಂಗಡಣೆ ವೇಳೆ ಬಹಳ ಸಮಸ್ಯೆ ಸೃಷ್ಟಿಯಾಗಿದೆ. ಮೀಸಲಾತಿ ನಿಗದಿಯಲ್ಲೂ ಗೊಂದಲ ಉಂಟಾಗಿದೆ’ ಎಂದರು.

ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ಈ ವಿಚಾರದಲ್ಲಿ ಗೊಂದಲ ಆಗಿರುವುದು ನಿಜ. ಹಲವು ಶಾಸಕರು ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದ ಜತೆಗೆ ಎರಡು ಸಲ ಚರ್ಚಿಸಲಾಗಿದೆ. ಸದಸ್ಯರ ಜತೆಗೆ ಸುದೀರ್ಘ ಸಮಾಲೋಚನೆ ನಡೆಸಿ ಚುನಾವಣಾ ಆಯೋಗದ ಗಮನಕ್ಕೆ ತಂದು ಲೋಪ ಸರಿಪಡಿಸಲಾಗುವುದು’ ಎಂದರು.

ADVERTISEMENT

ಕಾಂಗ್ರೆಸ್‌ನ ಎಚ್‌.ಕೆ.‍ಪಾಟೀಲ, ’ಜಿಲ್ಲಾಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಪುನರ್‌ವಿಂಗಡಣೆ ಕಾರ್ಯ ಮಾಡುತ್ತಿದ್ದಾರೆ. ಸರ್ಕಾರವು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರಾಜ್ಯ ಸರ್ಕಾರ ಚುನಾವಣೆ ಮುಂದೂಡಲು ಆಸಕ್ತಿ ತೋರಿದಂತೆ ಕಾಣುತ್ತದೆ. ಮೀಸಲಾತಿ ಹಾಗೂಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಚುನಾವಣಾ ಆಯೋಗದ ಜತೆಗೆ ಸರ್ಕಾರ ಸಮಾಲೋಚನೆ ನಡೆಸಿದರೆ ಕಾನೂನು ಉಲ್ಲಂಘನೆ ಆಗುತ್ತದೆ. ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ’ ಎಂದು ಅವರು ಗಮನ ಸೆಳೆದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇಡೀ ಪ್ರಕ್ರಿಯೆಯೇ ಅವೈಜ್ಞಾನಿಕವಾಗಿದೆ. ಲೋಪ ಸರಿಪಡಿಸಬೇಕು. ಸರ್ಕಾರ ಜಿಲ್ಲಾಧಿಕಾರಿ
ಗಳಿಗೆ ನಿರ್ದೇಶನ ನೀಡಬಹುದೇ ಹೊರತು ಚುನಾವಣಾ ಆಯೋಗಕ್ಕೆ ಅಲ್ಲ’ ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿ, ‘ಆಯೋಗದ ಕಾರ್ಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಮಾರ್ಗಸೂಚಿ ಬಗ್ಗೆ ಚರ್ಚೆ ನಡೆಸುತ್ತೇವೆ ಅಷ್ಟೇ. ಜತೆಗೆ, ಇದೇ ಗುರುವಾರ ಹಿರಿಯ ಸದಸ್ಯರ ಜತೆಗೆ ಸಮಾಲೋಚನೆ ನಡೆಸಿ ಪರಿಷ್ಕೃತ ಮಾರ್ಗಸೂಚಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ’ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ಚುನಾವಣೆ ಮುಂದೂಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಸಕಾಲಕ್ಕೆ
ಚುನಾವಣೆ ನಡೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.