ADVERTISEMENT

ಗೊರುಚ ಪ್ರಶಸ್ತಿ ಪ್ರದಾನ ಆ.1ಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 16:24 IST
Last Updated 28 ಜುಲೈ 2021, 16:24 IST
ಗೊ.ರು. ಚನ್ನಬಸಪ್ಪ
ಗೊ.ರು. ಚನ್ನಬಸಪ್ಪ   

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ‘ಗೊರುಚ ಶರಣ ಪ್ರಶಸ್ತಿ’ ಹಾಗೂ ‘ಗೊರುಚ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಆ.1ಕ್ಕೆ ಹಮ್ಮಿಕೊಂಡಿದೆ.

‌ಇಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್‌.ಬಿ. ಅಂಗಡಿ ಅವರು ಮಾತನಾಡಿ, ‘ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಪರಿಷತ್ತಿನ ಗೌರವಾಧ್ಯಕ್ಷರಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ತೋಂಟದ ಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಕೋವಿಡ್‌ನಿಂದಾಗಿ ಕಳೆದ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಎರಡು ವರ್ಷಗಳ ಪ್ರಶಸ್ತಿಗಳನ್ನು ಒಮ್ಮೆಲೆಯೇ ನೀಡಲಾಗುತ್ತಿದೆ. 2019ನೇ ಸಾಲಿಗೆ ಡಾ.ಸಿ. ವೀರಣ್ಣ, ಡಾ.ಬಿ.ಎಸ್. ಸ್ವಾಮಿ, ಪ್ರೊ.ಬಿ.ಆರ್. ಪೊಲೀಸ ಪಾಟೀಲ ಮತ್ತು ಪಿ.ಡಿ. ವಾಲೀಕರ ಆಯ್ಕೆಯಾಗಿದ್ದರು. 2020ನೇ ಸಾಲಿಗೆ ಡಾ. ಬಸವರಾಜ ಸಾದರ, ಡಾ.ಎಚ್.ಟಿ. ಪೋತೆ, ಡಾ. ಬಸವರಾಜ ಸಬರದ ಹಾಗೂ ಡಾ. ಕುರುವ ಬಸವರಾಜ್ ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ’ ಎಂದರು.

ADVERTISEMENT

‘ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂವಹನಕಾರರಾದ ಮಾಯಾಚಂದ್ರ ಅವರು ತಯಾರಿಸಿದ ‘ಗೊರುಚ ದತ್ತಿ ನಿಧಿ’ ಕಿರು ಸಾಕ್ಷ್ಯಚಿತ್ರವನ್ನು ಕೂಡ ಪ್ರದರ್ಶಿಸಲಾಗುತ್ತದೆ. ‘ಗೊರುಚ ಶರಣ ಪ್ರಶಸ್ತಿ’ಗಳು ಹಾಗೂ ‘ಗೊರುಚ ಜಾನಪದ ಪ್ರಶಸ್ತಿ’ಗಳು ತಲಾ ₹ 25 ಸಾವಿರ ನಗದು ಬಹುಮಾನ ಮತ್ತು ಗ್ರಂಥ ಪ್ರಶಸ್ತಿಗಳು ತಲಾ ₹ 10 ಸಾವಿರ ಬಹುಮಾನ ಒಳಗೊಳ್ಳಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.