ADVERTISEMENT

ಇಂಗಲಗುಪ್ಪೆ ಛತ್ರದಿಂದ ಸುಪ್ರೀಂ ಕೋರ್ಟ್‌ವರೆಗೆ: ನ್ಯಾ. ಬಿ.ವಿ. ನಾಗರತ್ನ ಹಾದಿ

ನ್ಯಾಯಮೂರ್ತಿ ಬಿ.ವಿ.ನಾಗರತ್ನಗೆ ಪದೋನ್ನತಿ, ತಂದೆಯ ನಂತರ ಮಗಳಿಗೆ ಗೌರವ

ಎಂ.ಎನ್.ಯೋಗೇಶ್‌
Published 27 ಆಗಸ್ಟ್ 2021, 3:29 IST
Last Updated 27 ಆಗಸ್ಟ್ 2021, 3:29 IST
ಪಾಂಡವಪುರ ತಾಲ್ಲೂಕು ಇಂಗಲಗುಪ್ಪೆ ಛತ್ರ ಗ್ರಾಮದಲ್ಲಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ಮನೆ
ಪಾಂಡವಪುರ ತಾಲ್ಲೂಕು ಇಂಗಲಗುಪ್ಪೆ ಛತ್ರ ಗ್ರಾಮದಲ್ಲಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ಮನೆ   

ಮಂಡ್ಯ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ
ಪಡೆದಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಪಾಂಡವಪುರ ತಾಲ್ಲೂಕು ಇಂಗಲಗುಪ್ಪೆ ಛತ್ರ ಗ್ರಾಮದವರು. ತಂದೆ ಇ.ಎಸ್‌.ವೆಂಕಟರಾಮಯ್ಯ ನಂತರ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುತ್ತಿರುವುದು ವಿಶೇಷ.

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದ್ದ 9 ನ್ಯಾಯಮೂರ್ತಿಗಳ ಪದೋನ್ನತಿಗೆ ಗುರುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅನುಮೋದನೆ ನೀಡಿದ್ದಾರೆ. ಹಿರಿತನದ ಆಧಾರದ ಮೇಲೆ ಬಿ.ವಿ.ನಾಗರತ್ನ ಅವರು 2027ರ ವೇಳೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಆ ಮೂಲಕ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆಯೂ ಅವರ ಮುಡಿಗೇರಲಿದೆ.

ನಾಗರತ್ನ ಅವರ ತಂದೆ ದಿ.ಇ.ಎಸ್‌.ವೆಂಕಟರಾಮಯ್ಯ ಅವರು 1989ರಲ್ಲಿ 6 ತಿಂಗಳು ದೇಶದ 19ನೇ ಮುಖ್ಯನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಕರ್ನಾಟಕದಿಂದ ಆಯ್ಕೆಯಾಗಿದ್ದ ಮೊದಲ ಮುಖ್ಯನ್ಯಾಯಮೂರ್ತಿಯಾಗಿದ್ದರು. 2027ರ ವೇಳೆಗೆ ನಾಗರತ್ನ ಅವರು ಸಿಜೆಐ ಹುದ್ದೆಗೇರಿದರೆ ದೇಶದಲ್ಲಿ ಮೊದಲ ಬಾರಿಗೆ ತಂದೆ–ಮಗಳು ಮುಖ್ಯನ್ಯಾಯಮೂರ್ತಿಯಾದ ಇತಿಹಾಸವೂ ನಿರ್ಮಾಣವಾಗಲಿದೆ.

ADVERTISEMENT

ಕರ್ನಾಟಕ ಹೈಕೋರ್ಟ್‌ನಿಂದ ವೃತ್ತಿ ಆರಂಭ

1962 ಅಕ್ಟೋಬರ್‌ 30ರಂದು ಜನಿಸಿದ ನಾಗರತ್ನ ಅವರು ಎಸ್‌ಎಸ್‌ಎಲ್‌ಸಿವರೆಗೂ ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ ಓದಿದ್ದರು. ತಂದೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ದೆಹಲಿಗೆ ತೆರಳಿದ ನಂತರ ಮುಂದಿನ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿದ್ದರು. 1987ರಲ್ಲಿ ದೆಹಲಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.

2008ರಲ್ಲಿ ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿ, 2010ರಿಂದ ಪೂರ್ಣಾವಧಿ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೂವರು ಮಹಿಳೆಯರಿಗೆ ಪದೋನ್ನತಿ

ಪದೋನ್ನತಿ ಪಡೆದಿರುವ 9 ನ್ಯಾಯಮೂರ್ತಿಗಳಲ್ಲಿ ಮೂವರು ಮಹಿಳೆಯರಿದ್ದಾರೆ. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ, ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಬೆಲಾ ಎಂ. ತ್ರಿವೇದಿ ಪದೋನ್ನತಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರಿಗೆ ಪದೋನ್ನತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.